

ಬೆಂಗಳೂರು: ಶಿವರಾಜಕುಮಾರ್ ಕೈಯಲ್ಲಿ ಸದ್ಯಕ್ಕೆ ಎಷ್ಟು ಸಿನಿಮಾಗಳಿವೆಯೋ ಲೆಕ್ಕ ಇಡುವುದು ಕಷ್ಟ. ಈಗಾಗಲೇ ಅವರು 'ಭಜರಂಗಿ 2' ಚಿತ್ರವನ್ನು ಮುಗಿಸಿದ್ದಾರೆ. ಅದಲ್ಲದೆ 'ಆರ್ಡಿಎಕ್ಸ್', 'ಭೈರತಿ ರಣಗಲ್ಲು', ವಿಜಯ್ ಮಿಲ್ಟನ್ ನಿರ್ದೇಶನದ ಹೊಸ ಚಿತ್ರದಲ್ಲಿ ಅವರು ನಟಿಸುತ್ತಾರೆ ಎಂದು ಈಗಾಗಲೇ ಸುದ್ದಿಯಾಗಿದೆ. ಇತ್ತೀಚೆಗಷ್ಟೇ, ಯೋಗರಾಜ್ ಭಟ್ ನಿರ್ದೇಶನದ ಹೊಸ ಚಿತ್ರವೊಂದರಲ್ಲಿ ಅವರು ನಟಿಸುತ್ತಾರೆ ಎಂದು ಸುದ್ದಿಯಾಗಿದೆ.
ಅದೆಲ್ಲದರ ಜತೆಗೆ, ಶಿವಣ್ಣ ಇನ್ನೊಂದು ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿರುವ ಸುದ್ದಿ ಬಂದಿದೆ. ಈ ಬಾರಿ ಅವರನ್ನು ನಿರ್ದೇಶಿಸುತ್ತಿರುವವರು ಹೊಸ ನಿರ್ದೇಶಕರು. ಈ ಹಿಂದೆ ಎ. ಹರ್ಷ, ಯೋಗಿ ಜಿ ರಾಜ್ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಕೊಟ್ರೇಶ್, ಈಗ ಹೊಸ ಚಿತ್ರವೊಂದನ್ನು ನಿರ್ದೇಶಿಸುವುದಕ್ಕೆ ಸಜ್ಜಾಗಿದ್ದಾರೆ. ಅದಕ್ಕೆ ಶಿವಣ್ಣ ಹೀರೋ ಆಗುವುದಕ್ಕೆ ಒಪ್ಪಿಕೊಂಡಿದ್ದಾರಂತೆ.
ಈ ಕುರಿತು ಮಾತನಾಡುವ ಕೊಟ್ರೇಶ್ ಚಪ್ಪರದಹಳ್ಳಿ, 'ಸಾಮಾಜಿಕ ಕಾಳಜಿ ಇರುವ ಈ ಚಿತ್ರದ ಕಥೆಯನ್ನು ಶಿವರಾಜಕುಮಾರ್ ಅವರಿಗೆ ಹೇಳಿದಾಗ, ಅವರು ಕಥೆ ಮೆಚ್ಚಿಕೊಂಡು ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ. ಅವರ ಪ್ರೋತ್ಸಾಹ ನನ್ನಂತಹ ಹೊಸಬರಿಗೆ ಕೆಲಸ ಮಾಡುವುದಕ್ಕೆ ಇನ್ನುಷ್ಟು ಸ್ಫೂರ್ತಿದಾಯಕ' ಎನ್ನುತ್ತಾರೆ ಕೊಟ್ರೇಶ್.
ಈ ಚಿತ್ರವನ್ನು ಎ.ಆರ್.ಕೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ಚೌಧರಿ ಎನ್ನುವವರು ನಿರ್ಮಿಸುತ್ತಿದ್ದಾರೆ. ಸದ್ಯಕ್ಕೆ ಚಿತ್ರದ ಕಥೆ ಓಕೆ ಆಗಿದೆ. ಮಿಕ್ಕಂತೆ ಕಲಾವಿದರು ಮತ್ತು ತಂತ್ರಜ್ಱರ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಸದ್ಯಕ್ಕೆ ಒಪ್ಪಿರುವ ಚಿತ್ರಗಳನ್ನು ಮುಗಿಸಿದ ನಂತರ, ಮುಂದಿನ ವರ್ಷ ಈ ಚಿತ್ರದಲ್ಲಿ ಶಿವರಾಜಕುಮಾರ್ ನಟಿಸುವ ಸಾಧ್ಯತೆ ಇದೆ.