

ಬಾಲಿವುಡ್ಗೆ ಅದೇನಾಗಿದೆಯೋ ಗೊತ್ತಿಲ್ಲ. ಚಿತ್ರೀಕರಣವಿಲ್ಲದಿದ್ದರೂ, ಕೆಲವು ತಿಂಗಳುಗಳಿಂದ ಒಂದೇ ಒಂದು ದೊಡ್ಡ ಸಿನಿಮಾ ಸೆಟ್ಟೇರದಿದ್ದರೂ, ಎಲ್ಲಕ್ಕಿಂತ ಹೆಚ್ಚಾಗಿ ಯಾವ ಚಿತ್ರ ಬಿಡುಗಡೆಯಾಗದಿದ್ದರೂ ... ಬಾಲಿವುಡ್ ಮಾತ್ರ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ.
ಈಗ ಇದು ಇನ್ನೊಂದು ಹಂತಕ್ಕೆ ಹೋಗಿದೆ. ನಿಮಗೆ ಅನುಭವ್ ಸಿನ್ಹಾ ಗೊತ್ತಿರಬಹುದು. ಇತ್ತೀಚಿನ ವರ್ಷಗಳಲ್ಲಿ 'ಮುಲ್ಕ್', 'ಆರ್ಟಿಕಲ್ 15', 'ಥಪ್ಪಡ್' ಮುಂತಾದ ಸೂಕ್ಷ್ಮಸಂವೇದನೆಯ ಚಿತ್ರಗಳನ್ನು ನಿರ್ದೇಶಿಸಿದವರು. ಅವರಿಗೆ ಈಗ್ಯಾಕೆ ಸಿಟ್ಟು ಬಂದಿದೆಯೋ ಗೊತ್ತಿಲ್ಲ. ಬಾಲಿವುಡ್ಗೆ ಗುಡ್ಬೈ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ಎನಫ್ ಈಸ್ ಎನಫ್. ನಾನು ಬಾಲಿವುಡ್ಗೆ ರಾಜೀನಾಮೆ ಕೊಡುವುದಕ್ಕೆ ತೀರ್ಮಾನಿಸಿದ್ದೇನೆ' ಎಂದು ಅವರು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ತಮ್ಮ ಟ್ವಿಟರ್ ಹ್ಯಾಂಡಲ್ನಲ್ಲಿ ತಮ್ಮ ಹೆಸರಿನ ಜತೆಗೆ ನಾಟ್ ಬಾಲಿವುಡ್ ಎಂದು ಬರೆದುಕೊಂಡಿದ್ದಾರೆ.
ಬಾಲಿವುಡ್ಗೆ ಅನುಭವ್ ಗುಡ್ಬೈ ಹೇಳಿರುವುದು ಸಾಕಷ್ಟು ಚರ್ಚೆಯಾಗುತ್ತಿದೆ. ಇಷ್ಟಕ್ಕೂ ಅವರ ಮಾತಿನ ಮರ್ಮವೇನು ಎಂಬುದು ಹಲವರ ಪ್ರಶ್ನೆಯಾಗಿದೆ. ಹಿಂದಿ ಚಿತ್ರರಂಗವನ್ನು ಬಾಲಿವುಡ್ ಎಂದು ಕರೆಯುವುದರ ಬಗ್ಗೆ ಹಲವರಿಗೆ ಆಕ್ಷೇಪಣೆ ಇದೆ. ಅನುಭವ್ ಸಹ ಬೇಸರಗೊಂಡು ಇದೇ ವಿಷಯವಾಗಿ ಧಿಕ್ಕಾರ ಕೂಗಿದ್ದಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಿರಿಯ ನಿರ್ದೇಶಕ ಸುಧೀರ್ ಮಿಶ್ರಾ, 'ಬಾಲಿವುಡ್ ಎಂದರೇನು? ನಾನು ಚಿತ್ರರಂಗಕ್ಕೆ ಬಂದಿದ್ದು ಸತ್ಯಜಿತ್ ರೇ, ರಾಜ್ ಕಪೂರ್, ಗುರುದತ್, ರಿತ್ವಿಕ್ ಘಾತಕ್, ಬಿಮಲ್ ರಾಯ್, ಹೃಷಿಕೇಶ್ ಮುಖರ್ಜಿ, ವಿಜಯ್ ಆನಂದ್, ಗುಲ್ಜಾರ್, ಶೇಖರ್ ಕಪೂರ್ ಮುಂತಾದವರ ಚಿತ್ರಗಳಿಂದ ಸ್ಫೂರ್ತಿಯಿಂದಾಗಿ. ಹಾಗಾಗಿ ಸದಾ ಅಲ್ಲೇ ಇರುತ್ತೇನೆ' ಎಂದು ಪರೋಕ್ಷವಾಗಿ ತಮ್ಮ ಸ್ಟೈಲಿನ ಚಿತ್ರಗಳು ಬೇರೆ ಎಂಬುದನ್ನು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಮತ್ತೊಬ್ಬ ನಿರ್ದೇಶಕ ಹನ್ಸಲ್ ಮೆಹ್ತಾ, 'ಬಿಡೋದಕ್ಕೆ ಇಲ್ಲೇನಿತ್ತು? ಬಾಲಿವುಡ್ ಯಾವತ್ತೂ ಅಸ್ತಿತ್ವದಲ್ಲೇ ಇರಲಿಲ್ಲ. ಇಲ್ಲಿದ್ದಿದ್ದು ಹಿಂದಿ ಚಿತ್ರರಂಗ ಮಾತ್ರ' ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಅನುಭವ್ ಅವರ ಹಲವು ಅಭಿಮಾನಿಗಳು ಸಹ, ನೀವು ಬೇಕಾದರೆ ಬಾಲಿವುಡ್ಗೆ ಚಿತ್ರಗಳನ್ನು ಮಾಡಬೇಡಿ, ಹಿಂದಿ ಚಿತ್ರರಂಗಕ್ಕೆ ಸಿನಿಮಾ ಮಾಡಿ ಎಂದು ಸಲಹೆ ನೀಡಿದ್ದಾರೆ.
ಇದೆಲ್ಲದರಿಂದ ಅನುಭವ್ ಮುಂದೆ ಯಾವ ನಿರ್ಧಾರಕ್ಕೆ ಬರುತ್ತಾರೋ ನೋಡಬೇಕು.