ಇದು ಅಂತ್ಯವಲ್ಲ ಶುಭಾರಂಭ: ಆತ್ಮಹತ್ಯೆಗೆ ಯೋಚಿಸುವವರ ಕಣ್ಣು ತೆರೆಸುವ ಸಿನಿಮಾ

samn
Published on

‘ನಾತಿಚರಾಮಿ’ ನಂತರ ಸಂಚಾರಿ ವಿಜಯ್ ಮತ್ತು ಶ್ರುತಿ ಹರಿಹರನ್ ಮತ್ತೆ ಜತೆಯಾಗಿ ಬಂದಿದ್ದಾರೆ. ಈ ಬಾರಿ ‘ಅಂತ್ಯವಲ್ಲ ಆರಂಭ’ ಎಂಬ ಚಿತ್ರದ ಮೂಲಕ. ಒಂದೆರೆಡು ವರ್ಷಗಳ ಹಿಂದೆಯೇ ಪ್ರಾರಂಭವಾಗಿದ್ದ ಈ ಚಿತ್ರ ಇದೀಗ ಮುಗಿದಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಚಿತ್ರದ ಹಾಡುಗಳು ಇತ್ತೀಚೆಗೆ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಬಿಡುಗಡೆ ಆಗಿವೆ. ಕಲಾವಿದರ ಸಂಘದ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಸಂಚಾರಿ ವಿಜಯ್ ಸಮ್ಮುಖದಲ್ಲಿ ಹಾಡುಗಳ ಬಿಡುಗಡೆ ಮಾಡಲಾಗಿದೆ. ‘ಅಂತ್ಯವಲ್ಲ ಆರಂಭ’ ಚಿತ್ರವನ್ನು ಜಯಪ್ರಕಾಶ್ (ಜೆಪಿ) ಮತ್ತು ಶ್ರೀಪಾದರಾವ್ ಜಂಟಿಯಾಗಿ ನಿರ್ದೇಶಿಸಿದ್ದಾರೆ. ಈ ಹಿಂದೆ ರಮೇಶ್ ಅರವಿಂದ್ ಅಭಿನಯದ ‘ಹೂಮಳೆ’ ಚಿತ್ರದ ನಿರ್ವಣದಲ್ಲೂ ಅವರು ತೊಡಗಿಸಿಕೊಂಡಿದ್ದರು. ಈಗ ಕಥೆ, ಚಿತ್ರಕಥೆ ಬರೆದು ಜಂಟಿಯಾಗಿ ‘ಅಂತ್ಯವಲ್ಲ ಆರಂಭ’ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಇನ್ನು ಚಿತ್ರವನ್ನು ಗಣೇಶ್ ಕುಮಾರ್ ನಿರ್ವಿುಸಲಿದ್ದಾರೆ.

ಇದೊಂದು ಸಂದೇಶಭರಿತ, ಸದಭಿರುಚಿಯ ಚಿತ್ರ ಎನ್ನುತ್ತಾರೆ ಜೆಪಿ. ಪರೀಕ್ಷೆಯಲ್ಲಿ ಫೇಲ್ ಆದಾಗ, ಪ್ರೇಮ ವಿಫಲವಾದಾಗ, ಉದ್ಯಮದಲ್ಲಿ ನಷ್ಟ ಸಂಭವಿಸಿದಾಗ, ಜೀವನದಲ್ಲಿ ಜಿಗುಪ್ಸೆಯಾದಾಗ ... ಬಹಳಷ್ಟು ಜನ ಆತ್ಮಹತ್ಯೆಯತ್ತ ಮುಖ ಮಾಡುವುದು ಸಹಜ. ಸತ್ತವರಿಗೆ ಆರಂಭವಿಲ್ಲದಿದ್ದರೂ, ಅಂತಹವರಿಗೆ ಮತ್ತೊಮ್ಮೆ ಶುಭಾರಂಭ ಇರುತ್ತದೆ ಎಂಬ ಸಂದೇಶ ಇರುವ ಈ ಚಿತ್ರದಲ್ಲಿ ವಿಜಯ್ ಮತ್ತು ಶ್ರುತಿ ಹರಿಹರನ್ ಗಂಡ-ಹೆಂಡತಿಯಾಗಿ ಅಭಿನಯಿಸಿದ್ದಾರೆ.

‘ಅಂತ್ಯವಲ್ಲ ಆರಂಭ’ ಚಿತ್ರದ ಚಿತ್ರೀಕರಣ ಸಾಗರ, ಬೆಂಗಳೂರು ಮುಂತಾದ ಕಡೆ ಮಾಡಲಾಗಿದೆ. ವಸುಮತಿ ಉಡುಪ ಅವರು ಸಂಭಾಷಣೆ ಜತೆಗೆ ಐದು ಹಾಡುಗಳಿಗೂ ಸಾಹಿತ್ಯ ರಚಿಸಿದ್ದಾರೆ. ಇನ್ನು ಸುಹಾಸ್ ಸಂಗೀತ ಸಂಯೋಜಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net