

ಬೆಂಗಳೂರು: ಗುರು ದೇಶಪಾಂಡೆ ನಿರ್ಮಾಣದ ಐದು ಕಥೆಗಳನ್ನು ಒಳಗೊಂಡ, ಐವರು ನಿರ್ದೇಶಕರು ನಿರ್ದೇಶನ ಮಾಡಿರುವ ಆಂಥಾಲಜಿ ಚಿತ್ರ 'ಪೆಂಟಗನ್'ನ ಐದನೇ ಕಥೆಯ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಇದೀಗ ಇದೇ ಚಿತ್ರದ ಮೂರನೆಯ ಕಥೆ ಹಾಡೊಂದು ಬಿಡುಗಡೆಯಾಗಿದೆ.
'ಕಾಮನಬಿಲ್ಲು ಮೂಡುತಿದೆ ' ಎಂಬ ಹಾಡಿನ ಲಿರಿಕಲ್ ವಿಡಿಯೋ ಇತ್ತೀಚೆಗೆ ಜಂಕಾರ್ ಮ್ಯೂಸಿಕ್ನಲ್ಲಿ ಬಿಡುಗಡೆ ಮಾಡಗಲಾಗಿದೆ. ಸಂತೋಷ ವೆಂಕಿ ಮತ್ತು ಇಂಚರ ರಾವ್ ಅವರ ಕಂಠದಲ್ಲಿ ಈ ಹಾಡು ಮೂಡಿ ಬಂದಿದೆ.
ಈ ಕಥೆಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ನಡೆಯುವ ಮೋಸ, ಅಪರಾಧ ಜಗತ್ತು, ಯುವ ಪೀಳಿಗೆಯ ಭವಿಷ್ಯದ ಕುರಿತು ಬೆಳಕು ಚೆಲ್ಲಲಾಗಿದೆ. ಜನಪ್ರಿಯ ನಟ ರಾಘು ಶಿವಮೊಗ್ಗ ನಿರ್ದೇಶನದಲ್ಲಿ ಈ ಅಧ್ಯಾಯದಲ್ಲಿ ಪ್ರಕಾಶ್ ಬೆಳವಾಡಿ, ತನಿಷಾ ಕುಪ್ಪಂದ, ಪ್ರೇರಣಾ, ಸಾಗರ್, ರಾಕೇಶ ಸೇರಿದಂತೆ ಹಲವರು ನಟಿಸಿದ್ದಾರೆ. ಕಿರಣ್ ಹಂಪಾಪುರ ಅವರ ಛಾಯಾಗ್ರಹಣ ಮತ್ತು ಮಣಿಕಾಂತ್ ಕದ್ರಿ ಅವರ ಸಂಗೀತ ಈ ಚಿತ್ರಕ್ಕಿದೆ.
ಮೊದಲೇ ಹೇಳಿದಂತೆ 'ಪೆಂಟಗನ್' ಚಿತ್ರದಲ್ಲಿ ಐದು ಕಥೆಗಳಿದ್ದು, ಆಕಾಶ್ ಶ್ರೀವತ್ಸ (ಶಿವಾಜಿ ಸುರತ್ಕಲ್), ಚಂದ್ರಮೋಹನ್ (ಬ್ರಹ್ಮಚಾರಿ), ರಾಘು ಶಿವಮೊಗ್ಗ (ಚೂರಿಕಟ್ಟೆ), ಕಿರಣ್ ಕುಮಾರ್ ಹಾಗೂ ಗುರು ದೇಶಪಾಂಡೆ ತಲಾ ಒಂದೊಂದು ಕಥೆಯನ್ನು ನಿರ್ದೇಶನ ಮಾಡಿದ್ದಾರೆ. ಜಿ ಸಿನಿಮಾಸ್ ಸಂಸ್ಥೆಯಡಿ ಈ ಚಿತ್ರವನ್ನು ಗುರು ದೇಶಪಾಂಡೆ ನಿರ್ಮಿಸಿದ್ದಾರೆ.