

ಎರಡು ವಾರಗಳ ಹಿಂದೆ ಸುದೀಪ್ ಅವರ ವಿಕ್ರಾಂತ್ ರೋಣ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಯಿತು. ಕಳೆದ ವಾರ ನಿರೂಪ್ ಭಂಡಾರಿ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಫಸ್ಟ್ ಲುಕ್ ಬಿಡುಗಡೆಯಾಯಿತು. ಈ ವಾರವೂ 'ಫ್ಯಾಂಟಮ್' ಚಿತ್ರತಂಡದಿಂದ ಏನಾದರೂ ಸರ್ಪ್ರೈಸ್ ಇರಬಹುದಾ ಎಂಬ ಪ್ರಶ್ನೆ ಸಹಜವಾಗಿಯೇ ಅವರ ಅಭಿಮಾನಿಗಳಲ್ಲಿ ಇತ್ತು.
ಅದಕ್ಕೆ ಸರಿಯಾಗಿ ಇಂದು ಸುದೀಪ್ ಅವರು ಟ್ವೀಟ್ ಮಾಡಿದ್ದಾರೆ. ನಾಳೆ ಬೆಳಿಗ್ಗೆ, ಪನ್ನಾ ಪಾತ್ರ ಪರಿಚಯ ಮಾಡಿಕೊಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
''ಫ್ಯಾಂಟಮ್' ಚಿತ್ರದ ಪನ್ನಾ ಪಾತ್ರದ ಫಸ್ಟ್ ಲುಕ್ ನಾಳೆ ಬಿಡುಗಡೆ ಮಾಡಲಾಗುತ್ತಿದೆ. ಆ ಪಾತ್ರದ ಬಗ್ಗೆ ನಮ್ಮ ಸೃಷ್ಟಿಕರ್ತರೇ ಎಲ್ಲಾ ವಿಷಯಗಳನ್ನು ಹೇಳಲಿದ್ದಾರೆ. ಗುರುವಾರ ಬೆಳಿಗ್ಗೆ 10ಕ್ಕೆ ಹೊಸ ಪೋಸ್ಟರ್ ಬಿಡುಗಡೆಯಾಗಲಿದೆ' ಎಂದು ಹೇಳಿದ್ದಾರೆ.
ಇಷ್ಟಕ್ಕೂ ಈ ಪನ್ನಾ ಯಾರು? ಈ ಬಗ್ಗೆ ಸುದೀಪ್ ಹೇಳಿಲಲ್ಲ. ನಿರ್ದೇಶಕ ಅನೂಪ್ ಭಂಡಾರಿ ಅವರೇ ಈ ವಿಷಯವನ್ನು ಬಹಿರಂಗಪಡಿಸಲಿದ್ದಾರೆ ಎಂಬ ವಿಷಯವನ್ನು ಅವರು ಹೇಳಿದ್ದಾರೆ. ಹಾಗಾಗಿ ಈ ಪನ್ನಾ ಯಾರು ಎಂಬ ಉತ್ತರಕ್ಕೆ, ಗುರುವಾರ ಬೆಳಿಗ್ಗೆ 10 ಗಂಟೆಯವರೆಗೂ ಕಾಯಬೇಕು.
'ಫ್ಯಾಂಟಮ್' ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಇದೆ. ಇನ್ನು ಚಿತ್ರದ ಮೊದಲ ಸ್ನೀಕ್ಪೀಕ್ನಲ್ಲಿ ದೋಣಿಯಲ್ಲಿ ಸುದೀಪ್ ಜತೆಗೆ ಒಂದು ಹುಡುಗಿ ಇದ್ದಾಳೆ. ಈ ಹುಡುಗಿ ಮತ್ತು ಶ್ರದ್ಧಾ ಇಬ್ಬರಲ್ಲಿ ಪನ್ನಾ ಯಾರು? ಅಥವಾ ಇವರಿಬ್ಬರನ್ನೂ ಬಿಟ್ಟು ಪನ್ನಾ ಎಂಬ ಇನ್ನೊಂದು ಪಾತ್ರ ಯಾವುದಾದರೂ ಇದೆಯಾ? ಎಂಬ ಉತ್ತರಕ್ಕೆ ಗುರುವಾರದವರೆಗೂ ಕಾಯಬೇಕು.
ಜಾಕ್ ಮಂಜು ನಿರ್ಮಾಣ ಮಾಡುತ್ತಿರುವ 'ಫ್ಯಾಂಟಮ್' ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸುತ್ತಿದ್ದಾರೆ.