ಮತ್ತೊಮ್ಮೆ ಒಂದಾನೊಂದು ಕಾಲದಲ್ಲಿ...; 43 ವರ್ಷಗಳ ಹಳೆ ಶೀರ್ಷಿಕೆಯಲ್ಲಿ ಹೊಸ ಚಿತ್ರ

Ondanondu Kaladalli
Published on

ಬೆಂಗಳೂರು: ಶಂಕರ್ ನಾಗ್ ಅಭಿನಯದ ಚಿತ್ರ ‘ಒಂದಾನೊಂದು ಕಾಲದಲ್ಲಿ’ 1979ರಲ್ಲಿ ಬಿಡುಗಡೆಯಾಗಿತ್ತು. ಈಗ 43 ವರ್ಷಗಳ ಬಳಿಕ ಅದೇ ಹೆಸರಿನ ಮತ್ತೊಂದು ಚಿತ್ರ ರೆಡಿಯಾಗಿದೆ. ಹಾಗಂತ ಆ ಚಿತ್ರಕ್ಕೂ, ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಇದು ಪಕ್ಕಾ ಲವ್​ಸ್ಟೋರಿಯಂತೆ. ಹಿರಿಯ ನಿರ್ದೇಶಕ ಭಗವಾನ್ ಅವರ ಬಳಿ ತರಬೇತಿ ಪಡೆದಿರುವ ಎನ್ ಮಂಜುನಾಥ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು, ಜತೆಗೆ ಹೀರೋ ಕೂಡ ಆಗಿದ್ದಾರೆ.

1980ರ ರೆಟ್ರೋ ಶೈಲಿಯ ಕಥೆ ಹೊಂದಿರುವ ಈ ಚಿತ್ರದಲ್ಲಿ ಕರವಸ್ತ್ರವೂ ಪ್ರಮುಖ ಪಾತ್ರವಹಿಸಿದೆ. ನಾಯಕ, ನಾಯಕಿ ಒಬ್ಬರನ್ನೊಬ್ಬರು ಭೇಟಿಯಾಗಿರುವುದಿಲ್ಲ. ಕರವಸ್ತ್ರ ಇಬ್ಬರ ನಡುವೆ ಆಟವಾಡಿಸುತ್ತಿರುತ್ತದೆ. ಅದು ಇಬ್ಬರನ್ನು ಹೇಗೆ ಒಂದಾಗಿಸುತ್ತದೆ ಎಂಬುದನ್ನು ಅಂದಿನ ಕಾಲಘಟ್ಟಕ್ಕೆ ಅನುಗುಣವಾಗಿ ಹೇಳುವ ಪ್ರಯತ್ನ ಮಾಡಿದ್ದಾರಂತೆ ಮಂಜುನಾಥ್. ಚಿತ್ರಕ್ಕೆ ಹರ್ಷಲಹನಿ ನಾಯಕಿಯಾಗಿದ್ದು, ಉಳಿದಂತೆ ಶೋಭರಾಜ್, ಸಂಗೀತಾ, ನೀನಾಸಂ ಅಶ್ವತ್ಥ್, ತರುಣ್ ಕುಮಾರ್ ಪ್ರಮುಖ ತಾರಾಗಣದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಪ್ರಶಾಂತ್ ಹೊನ್ನಾವರ ಸಾಹಿತ್ಯ, ಯಶವಂತ್ ಭೂಪತಿ ಸಂಗೀತ, ಏಳುಕೋಟೆ ಚಂದ್ರು ಛಾಯಾಗ್ರಹಣವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net