

ಬೆಂಗಳೂರು: ಈಗಾಗಲೇ ಆತ್ಮಗಳ ಸುತ್ತ ಹಲವು ಚಿತ್ರಗಳು ಕನ್ನಡದಲ್ಲಿ ಬಿಡುಗಡೆಯಾಗಿವೆ. ಈಗ ಆತ್ಮದ ಕುರಿತಾದ ಇನ್ನೊಂದು ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತಿದೆ. ಅದೇ 'ಅಲೈಕ್ಯಾ'. ಈ ಆತ್ಮದ ವಿಶೇಷತೆ ಏನು ಗೊತ್ತಾ? ಇದು ವಜ್ರವನ್ನು ಕಾಯುತ್ತದಂತೆ.
ಹಿತೇಶ್ ಮೂವೀಸ್ ಲಾಂಛನದಲ್ಲಿ ಎಂ.ಭೂಪತಿ ನಿರ್ಮಿಸುತ್ತಿರುವ ಹಾರರ್ ಚಿತ್ರ 'ಅಲೈಕ್ಯಾ'. ಈಗಾಗಲೇ ಈ ಚಿತ್ರದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಕ್ತಾಯದ ಹಂತದಲ್ಲಿದೆ. ಈ ಚಿತ್ರವನ್ನು ಸಾತ್ವಿಕ್ ಎಂ.ಭೂಪತಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಒಂದಿಷ್ಟು ಸ್ನೇಹಿತರು ವೀಕೆಂಡ್ ಕಳೆಯಲು ಜಾಲಿ ಟ್ರಿಪ್ಗೆ ಹೋಗುತ್ತಾರೆ. ಗೆಸ್ಟ್ ಹೌಸ್ವೊಂದಕ್ಕೆ ತೆರಳಿ ಅಲ್ಲಿ ತಂಗುತ್ತಾರೆ. ಆ ಅತಿಥಿ ಗೃಹದಲ್ಲಿ ಆತ್ಮಗಳಿರುವುದು ತಿಳಿದುಬರುತ್ತದೆ. ಆಗ ಅವರು ಅಲ್ಲಿಂದ ತಪ್ಪಿಸಿಕೊಂಡು ಹೊರಹೋಗಲು ಸಾಕಷ್ಟು ಪ್ರಯತ್ನ ನಡೆಸಿ ವಿಫಲರಾಗುತ್ತಾರೆ. ಅ ಮನೆಯಲ್ಲಿ ಒಂದು ಅಮೂಲ್ಯವಾದ ವಜ್ರವಿದ್ದು, ಅದಕ್ಕೆ ಆತ್ಮವೊಂದು ಕಾವಲಿರುತ್ತದೆ ಕಾವಲಾಗಿರುತ್ತವೆ. ಅದರಲ್ಲಿ ಒಂದು ಅತ್ಮ ಮಾತ್ರ ಇವರನ್ನು ಅಲ್ಲಿಂದ ಹೊರ ಕಳಿಸಲು ನೋಡಿದರೆ, ಮತ್ತೊಂದು ಆತ್ಮ ಅವರನ್ನು ಅಲ್ಕೇ ಇರುವ ಹಾಗೆ ನೋಡಿಕೊಳ್ಳುತ್ತದೆ. ಈ ಆತ್ಮದಿಂದ ಅವರು ಹೇಗೆ ವಜ್ರವನ್ನು ವಶಪಡಿಸಿಕೊಳ್ಳುತ್ತಾರೆ ಎಂಬುದೇ ಈ ಚಿತ್ರದ ಕಥೆ.
ಬೆಂಗಳೂರು, ಚಿಕ್ಕಮಗಳೂರು, ಮೇಲುಕೋಟೆ, ಸುತ್ತಮುತ್ತ ಈ ಹಾರರ್ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಕಾಮಿಡಿ, ಲವ್, ಹಾರರ್, ಸಸ್ಪೆನ್ಸ್ ಅಂಶಗಳಿರುವ 'ಅಲೈಕ್ಯಾ' ಚಿತ್ರಕ್ಕೆ ಸಾಯಿ ಸೋಮೇಶ್ ಅವರ ಸಂಗೀತ, ಬುಗುಡೆ ವೀರೇಶ್ ಅವರ ಛಾಯಾಗ್ರಹಣವಿದೆ.
'ಅಲೈಕ್ಯಾ' ಚಿತ್ರದಲ್ಲಿ ದರ್ಶಿನಿ ಒಡೆಯರ್, ನಿಸರ್ಗ, ಮನ್ವೀರ್ ಚವ್ಹಾನ್, ವಿವೇಕ ಚಕ್ರವರ್ತಿ, ವಜ್ರ, ಕಾವ್ಯ ಪ್ರಕಾಶ್, ಜಾಹ್ನವಿ ಮುಂತಾದವರು ಅಭಿನಯಿಸಿದ್ದಾರೆ.