ಗಣೇಶ್ ಹುಟ್ಟುಹಬ್ಬಕ್ಕೆ ಇನ್ನೊಂದು ಸಿನಿಮಾ ಅನೌನ್ಸ್​ ಆಯ್ತು!

Ganesh - Prashanth Raj Film - Final
Published on

'ಗೋಲ್ಡನ್ ಸ್ಟಾರ್' ಗಣೇಶ್​ ಅಭಿನಯದಲ್ಲಿ ಈ ಹಿಂದೆ ಪ್ರಶಾಂತ್​ ರಾಜ್​, 'ಜೂಮ್​' ಮತ್ತು 'ಆರೆಂಜ್​' ಎಂಬ ಎರಡು ಚಿತ್ರಗಳನ್ನು ಮಾಡಿದ್ದರು. ಇದೀಗ ಗಣೇಶ್​ ಅವರ ಹುಟ್ಟುಹಬ್ಬದ ಸಂದಭರ್ದಲ್ಲಿ ಪ್ರಶಾಂತ್​ ರಾಜ್​ ಇನ್ನೊಂದು ಸಿನಿಮಾ ಅನೌನ್ಸ್​ ಮಾಡಿದ್ದಾರೆ.

ಸದ್ಯಕ್ಕೆ ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. 'ಪ್ರೊಡಕ್ಷನ್​ ನಂ 7' ಎಂಬ ಹೆಸರಿನಲ್ಲಿ ಈ ಚಿತ್ರದ ಕೆಲಸಗಳು ಶುರುವಾಗಿದ್ದು, ಪ್ರಶಾಂತ್ ರಾಜ್ ತಮ್ಮ 'ನಿಮ್ಮ ಸಿನಿಮಾ' ಪ್ರೊಡಕ್ಷನ್​ ಹೌಸ್​ನ 10ನೇ ವಾರ್ಷಿಕೋತ್ಸವ ಮತ್ತು ಗಣೇಶ್​ ಅವರ ಹುಟ್ಟುಹಬ್ಬದ ಅಂಗವಾಗಿ ಈ ಚಿತ್ರವನ್ನು ಘೋಷಿಸಿದ್ದಾರೆ. ಅಷ್ಟೇ ಅಲ್ಲ, ಈ ಸಂದರ್ಭದಲ್ಲಿ ಗಣೇಶ್​ ಅವರ ಹುಟ್ಟುಹಬ್ಬಕ್ಕೆ ವಿಶೇಷ ಕೇಕ್​ ಮಾಡಿಸಿ, ಅವರಿಂದ ಕಟ್​ ಮಾಡಿಸಿದ್ದಾರೆ ನಿರ್ದೇಶಕ ಪ್ರಶಾಂತ್​ ರಾಜ್​.

ಈ ಚಿತ್ರಕ್ಕೂ 'ಜೂಮ್​' ಮತ್ತು 'ಆರೆಂಜ್​' ಚಿತ್ರಗಳಿಗೆ ಕೆಲಸ ಮಾಡಿದ ತಂತ್ರಜ್ಱರೇ ಮುಂದುವರೆಯಲಿದ್ದಾರೆ. ಎಸ್​.ಎಸ್​. ತಮನ್​ ಸಂಗೀತ ಸಂಯೋಜಿಸಲಿದ್ದು, ಸಂತೋಷ್​ ರೈ ಪಾತಾಜೆ ಛಾಯಾಗ್ರಹಣ ಮಾಡಲಿದ್ದಾರೆ. ಈ ಹಿಂದಿನ ಎರಡು ಚಿತ್ರಗಳು ರೊಮ್ಯಾಂಟಿಕ್​ ಕಾಮಿಡಿಗಳಾಗಿದ್ದು, ಈ ಬಾರಿ ಪ್ರಶಾಂತ್ ರಾಜ್​ ಅವರು ಗಣೇಶ್​ ಅಭಿನಯದಲ್ಲಿ ಕ್ರೈಮ್​ ಥ್ರಿಲ್ಲರ್​ ಮಾಡುವುದಕ್ಕೆ ಹೊರಟಿದ್ದಾರೆ.

ಚಿತ್ರದ ಪೋಸ್ಟರ್​ ಬಿಡುಗಡೆಯಾಗಿದ್ದರೂ, ಚಿತ್ರ ಶುರುವಾಗುವುದಕ್ಕೆ ಇನ್ನೂ ಒಂದು ವರ್ಷವಾದರೂ ಬೇಕು. ಪ್ರಮುಖವಾಗಿ 'ಗಾಳಿಪಟ 2' ಮತ್ತು 'ಸಖತ್​' ಚಿತ್ರಗಳಲ್ಲಿ ನಟಿಸುತ್ತಿರುವ ಗಣೇಶ್​, ಮೊದಲು ಆ ಚಿತ್ರಗಳನ್ನು ಕಂಪ್ಲೀಟ್​ ಮಾಡಬೇಕಿದೆ. ಆ ನಂತರ, ಮಹೇಶ್​ ಗೌಡ ನಿರ್ದೇಶನದ 'ತ್ರಿಬಲ್​ ರೈಡಿಂಗ್​' ಎಂಬ ಚಿತ್ರದಲ್ಲಿ ಗಣೇಶ್​ ನಟಿಸಲಿದ್ದಾರೆ. ಈ ಮೂರು ಚಿತ್ರಗಳಿಗೆ ಒಂದು ವರ್ಷವಾದರೂ ಬೇಕು.

ಇದಲ್ಲದೆ ಸಿಂಪಲ್​ ಸುನಿ ನಿರ್ದೇಶನದ 'ದಿ ಸ್ಟೋರಿ ಆಫ್​ ರಾಯಗಢ' ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದು, ಆ ಚಿತ್ರದ ಕೆಲಸಗಳು ಇವೆಲ್ಲಾ ಚಿತ್ರದ ಮುಗಿದ ನಂತರ ಪ್ರಾರಂಭವಾಗುತ್ತದಂತೆ. ಹಾಗಾಗಿ ಪ್ರಶಾಂತ್​ ರಾಜ್​ ಅವರ ಚಿತ್ರವು ಮುಂದಿನ ವರ್ಷ ಶುರುವಾಗುತ್ತದೋ ಅಥವಾ 2022ಕ್ಕೆ ಪ್ರಾರಂಭವಾಗುತ್ತದೋ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net