ತಮಿಳಿನ ಸೂಪರ್​ ಹಿಟ್​ ಚಿತ್ರದ ಹಿಂದಿ ರೀಮೇಕ್​ನಲ್ಲಿ ರಣವೀರ್​ ...

Anniyan - Hindi - Final
Published on

ಮುಂಬೈ: ತಮಿಳಿನ ಖ್ಯಾತ ನಿರ್ದೇಶಕ ಶಂಕರ್​ ಅವರ ಸೂಪರ್​ ಹಿಟ್​ ಚಿತ್ರಗಳ ಪೈಕಿ ಒಂದು 'ಅನ್ನಿಯನ್​'. ವಿಕ್ರಮ್​ ಅಭಿನಯದ ಈ ಚಿತ್ರ ತಮಿಳಿನಲ್ಲಿ ಹಿಟ್​ ಆಗುವುದರ ಜತೆಗೆ ತೆಲುಗು ಮತ್ತು ಹಿಂದಿಗೂ 'ಅಪರಿಚಿತುಡು' ಮತ್ತು 'ಅಪರಿಚಿತ್​' ಎಂಬ ಹೆಸರಿನಲ್ಲಿ ಡಬ್​ ಆಗಿತ್ತು.

ಈಗ ಇದೇ ಚಿತ್ರವು, ಹಿಂದಿಯಲ್ಲಿ ಹೊಸದಾಗಿ ರೀಮೇಕ್​ ಆಗುವುದಕ್ಕೆ ಸಜ್ಜಾಗಿದೆ. ಬಾಲಿವುಡ್​ನ ಸದ್ಯದ ಸೆನ್ಸೇಷನ್​ ಎಂದನಿಸಿಕೊಂಡಿರುವ ರಣವೀರ್​ ಸಿಂಗ್​ ಈ ಚಿತ್ರದಲ್ಲಿ ನಟಿಸುತ್ತಿದ್ದು, ಮೂಲ ಚಿತ್ರವನ್ನು ನಿರ್ದೇಶಿಸಿದ್ದ ಶಂಕರ್​ ಅವರೇ ಈ ಚಿತ್ರವನ್ನೂ ನಿರ್ದೇಶನ ಮಾಡುತ್ತಿದ್ದಾರೆ. ಅವರಿಬ್ಬರನ್ನೂ ಈ ಚಿತ್ರದಲ್ಲಿ ಜತೆಗೂಡಿಸುತ್ತಿರುವುದು ಪೆನ್​ ಮೂವೀಸ್​ನ ಜಯಂತಿಲಾಲ್​ ಗಢ.

ಇದು ಶಂಕರ್​ ಅವರ ಎರಡನೆಯ ಹಿಂದಿ ಚಿತ್ರವಾಗಿದ್ದು, ಇದಕ್ಕೂ ಮುನ್ನ ತಮ್ಮ 'ಮುದಲ್ವನ್​' ಚಿತ್ರವನ್ನು ಹಿಂದಿಯಲ್ಲಿ 'ನಾಯಕ್​' ಹೆಸರಿನಲ್ಲಿ ರೀಮೇಕ್ ಮಾಡಿದ್ದರು. ಇದಲ್ಲದೆ ಅವರು ಹಲವು ಚಿತ್ರಗಳಿದ್ದು ಹಿಂದಿ ಸೇರಿದಂತೆ ಬೇರೆ ಭಾಷೆಗಳಿಗೆ ಡಬ್​ ಆಗಿವೆ.

'ಅನ್ನಿಯನ್​' ಚಿತ್ರವು 16 ವರ್ಷಗಳ ಹಿಂದೆ ಬಿಡುಗಡೆಯಾಗಿತ್ತು. ಈಗ ಅದೇ ಕಥೆಯನ್ನು ಇಂದಿನ ಸ್ಥಿತಿಗತಿಗಳಿಗೆ ತಕ್ಕಂತೆ ಬದಲಾವಣೆ ಮಾಡಿ ಚಿತ್ರ ನಿದೇರ್ಶಿಸುವುದಕ್ಕೆ ಹೊರಟಿದ್ದಾರೆ ಶಂಕರ್​. ಈ ಚಿತ್ರ ಮುಂದಿನ ವರ್ಷ ಪ್ರಾರಂಭವಾಗಲಿದ್ದು, ಅಷ್ಟರಲ್ಲಿ ಶಂಕರ್​ ಮತ್ತು ರಣವೀರ್​ ಇಬ್ಬರೂ ತಮ್ಮ ಬೇರೆ ಕೆಲಸಗಳನ್ನು ಮುಗಿಸಿಕೊಂಡು, ಈ ಚಿತ್ರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net