ಆಷಾಡಕ್ಕೂ ಮುನ್ನ ಆತ್ಮಕ್ಕೆ ಮುಹೂರ್ತ; ಕನ್ನಡದಲ್ಲೊಂದು ಭೂತ, ಪಿಶಾಚಿಗಳ ಬೇಟೆಯಾಡುವ ಕಥೆ

atma
Published on

ಬೆಂಗಳೂರು: ಸಾಮಾನ್ಯವಾಗಿ ಆಷಾಡ ಮಾಸದಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ. ಹೀಗಾಗಿಯೇ ಆಷಾಡ ಪ್ರಾರಂಭಕ್ಕೂ ಮುನ್ನ ಹಲವು ಸಿನಿಮಾಗಳು ಸೆಟ್ಟೇರುತ್ತಿವೆ. ಅದಕ್ಕೆ ಹೊಸ ಸೇರ್ಪಡೆ ‘ಆತ್ಮ’.

ಈ ಹಿಂದೆ ‘ಅಸ್ಥಿರ’ ಚಿತ್ರದಲ್ಲಿ ನಟಿಸಿದ್ದ ಅನಿಲ್ ಸಿ.ಆರ್ ಕಥೆ ಬರೆದು, ನಿರ್ಮಿಸಿ ನಾಯಕನಾಗಿ ನಟಿಸುತ್ತಿದ್ದಾರೆ. ‘ಅಚಲ’, ‘ಓಂ ಶಾಂತಿ ಓಂ’ ಮತ್ತು ‘ಅಸ್ಥಿರ’ ಚಿತ್ರಗಳನ್ನು ನಿರ್ದೇಶಿಸಿದ ಎಸ್.ಆರ್. ಪ್ರಮೋದ್ ‘ಆತ್ಮ’ಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಹೆಸರೇ ಹೇಳುವಂತೆ ಇದೊಂದು ಹಾರರ್ ಸಿನಿಮಾ ಆಗಿದ್ದು, ಆರು ಸ್ನೇಹಿತರು ವೀಕೆಂಡ್ ಪಾರ್ಟಿಗೆಂದು ಟ್ರಿಪ್ ಹೋಗುತ್ತಾರೆ. ಆ ಗುಂಪಿನಲ್ಲಿ ಒಬ್ಬಳು ಘೋಸ್ಟ್ ಹಂಟರ್ ಕೂಡ ಇರುತ್ತಾಳೆ. ಅವರಿಗೆ ಅಲ್ಲಿ ಆತ್ಮವೊಂದು ಸಿಕ್ಕು, 20 ವರ್ಷಗಳ ಹಿಂದಿನ ಭಯಾನಕ ಘಟನೆ ತೆರೆದುಕೊಳ್ಳುತ್ತದೆ. ಕೊನೆಗೆ ಆ ಆತ್ಮದಿಂದ ಅವರು ಹೇಗೆ ತಪ್ಪಿಸಿಕೊಳ್ಳುತ್ತಾರೆ ಎಂಬುದೇ ಚಿತ್ರದ ಕಥೆ.

ಅನಿಲ್ ಜತೆ ಕಾವ್ಯ, ಹರ್ಷಿತ್, ದಿವ್ಯ, ಪುಷ್ಪ, ಪ್ರೀತಿ ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು ನಿತಿನ್ ರಾಜ್ ಸಂಗೀತ, ರಣಧೀರ್ ನಾಯಕ ಛಾಯಾಗ್ರಹಣ ಆಯುರ್ ಸ್ವಾಮಿ ಸಂಕಲನವಿರಲಿದೆ. ಜುಲೈ 2ರಿಂದ ಚಿತ್ರೀಕರಣ ಪ್ರಾರಂಭಿಸಿ ನವೆಂಬರ್‌ನಲ್ಲಿ ಸಿನಿಮಾ ರಿಲೀಸ್ ಮಾಡುವ ಆಲೋಚನೆ ಚಿತ್ರತಂಡದ್ದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net