

ಬೆಂಗಳೂರು: ಬಂಕಿಮ ಚಂದ್ರ ಚಟರ್ಜಿ ಅವರು ಸುಮಾರು 140 ವರ್ಷಗಳ ಹಿಂದೆ ಬರೆದಿದ್ದ ‘ಆನಂದಮಠ’ ಕಾದಂಬರಿಯು ಇದೀಗ ಚಲನಚಿತ್ರವಾಗುತ್ತಿದೆ. ಎಸ್.ಎಸ್. ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಕಥೆ-ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ‘1770’ ಎಂದು ಹೆಸರಿಡಲಾಗಿದ್ದು, ಈ ಚಿತ್ರವನ್ನು ರಾಜಮೌಳಿ ಶಿಷ್ಯ ಅಶ್ವಿನ್ ಗಂಗರಾಜು ನಿರ್ದೇಶನ ಮಾಡುತ್ತಿದ್ದಾರೆ. ಐದು ಭಾಷೆಗಳಲ್ಲಿ ಮೂಡಿಬರುತ್ತಿರುವ ಈ ಪ್ಯಾನ್ ಇಂಡಿಯಾ ಚಿತ್ರವು ದೀಪಾವಳಿಗೆ ಪ್ರಾರಂಭವಾಗಲಿದೆ. 75ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಈ ಚಿತ್ರವನ್ನು ಅಧಿಕೃತವಾಗಿ ಘೋಷಿಸುವುದರ ಜತೆಗೆ ಪೋಸ್ಟರ್ ಸಹ ಬಿಡುಗಡೆ ಮಾಡಲಾಗಿದೆ.
ಬಂಕಿಮ ಚಂದ್ರ ಅವರ ‘ಆನಂದಮಠ’ ಕಾದಂಬರಿಯಲ್ಲಿ ಮೊದಲ ಬಾರಿಗೆ ವಂದೇ ಮಾತರಂ ಕವನವು ಪ್ರಕಟವಾಗಿತ್ತು. ಈ ಕವನವು ಬ್ರಿಟಿಷ್ ಸಾಮ್ರಾಜ್ಯವನ್ನು ಅಕ್ಷರಶಃ ಅಲ್ಲಾಡಿಸಿತ್ತು. ವಂದೇ ಮಾತರಂ ಎನ್ನುವುದು ಮಹರ್ಷಿ ಬಂಕಿಮ ಚಂದ್ರರು ದೇಶವನ್ನು ಒಗ್ಗೂಡಿಸಲು ಉಚ್ಛರಿಸಿದ ಮಂತ್ರ ಎನ್ನುತ್ತಾರೆ ವಿಜಯೇಂದ್ರ ಪ್ರಸಾದ್. ಈ ಕುರಿತು ಮಾತನಾಡಿರುವ ಅವರು, ‘ಈ ದೇಶವು ಬ್ರಿಟಿಷರಿಂದ ಅನುಭವಿಸುತ್ತಿದ್ದ ದಾಸ್ಯ ಮತ್ತು ಅನ್ಯಾಯದ ವಿರುದ್ಧ ಭಾರತೀಯರನ್ನು ಒಗ್ಗೂಡಿಸಲು ಬಳಸಿದ ಒಂದು ಮಂತ್ರವಾಗಿತ್ತು. ಈ ಚಿತ್ರದ ಮೂಲಕ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ ಅದೆಷ್ಟೋ ಅಜ್ಞಾತ ವೀರ ಯೋಧರ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದೇವೆ’ ಎಂದು ಹೇಳಿಕೊಂಡಿದ್ದಾರೆ ವಿಜಯೇಂದ್ರ ಪ್ರಸಾದ್.
ಬಹುಕೋಟಿ ವೆಚ್ಚದ ‘1770’ ಚಿತ್ರವನ್ನು ಎಸ್ಎಸ್1 ಎಂಟರ್ಟೈನ್ವೆುಂಟ್ ಮತ್ತು ಪಿಕೆ ಎಂಟರ್ಟೈನ್ವೆುಂಟ್ ಸಂಸ್ಥೆಗಳಡಿ ಶೈಲೇಂದ್ರ ಕುಮಾರ್, ಸುಜಯ್ ಕುಟ್ಟಿ, ಕೃಷ್ಣಕುಮಾರ್ ಬಿ ಮತ್ತು ಸೂರಜ್ ಶರ್ಮ ನಿರ್ವಿುಸುತ್ತಿದಾರೆ.