

ಮುಂಬೈ: ಫಿಲಂಫೇರ್ ಅವಾರ್ಡ್ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಬಾಲಿವುಡ್ನ ಪ್ರಸಿದ್ಧ ನಟ ಸಲ್ಮಾನ್ ಖಾನ್ ತಾನು ಯಾವುದೇ ಅವಾರ್ಡ್ ಫಂಕ್ಷನ್ಗೆ ಹೋಗಲ್ಲ ಎಂದಿದ್ದಾರೆ. ಅರೇ ಇದೇನಪ್ಪಾ ಹೀಗೆಂದಿದ್ದಾರೆ ಅಂತ ಯೋಚಿಸ್ತಿದೀರಾ? ಹಾಗಾದರೆ ಮುಂದೆ ಓದಿ.
ನಟ ಸಲ್ಮಾನ್ ಖಾನ್ ಅವರ ಹಳೆಯ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯಾವುದೋ ಸಿನಿಮಾದಲ್ಲಿ "ತಮ್ಮ ಬಗ್ಗೆ ತಮಗೆ ನಂಬಿಕೆ ಇಲ್ಲದವರು ಮಾತ್ರ ಅವಾರ್ಡ್ ಬಯಸುತ್ತಾರೆ ಎಂದು ನನಗನಿಸುತ್ತೆ. ನಾನು ಫಿಲಂಫೇರ್ ಆಗಲೀ ಅಥವಾ ಯಾವುದೇ ಸ್ಟುಪಿಡ್ ಅವಾರ್ಡ್ ಫಂಕ್ಷನ್ಗಾಗಲೀ ಹೋಗೋದಿಲ್ಲ. ರಾಷ್ಟ್ರೀಯ ಪ್ರಶಸ್ತಿ ಬಂದರೆ ಮಾತ್ರ ಹೋಗಿ ತಗೋತೀನಿ" ಎಂದು ಡೈಲಾಗ್ ಹೇಳಿರೋ ವಿಡಿಯೋ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ.
ಫೆ.15ರಂದು ಫಿಲಂಫೇರ್ 2020 ಕಾರ್ಯಕ್ರಮ ನಡೆದಿದ್ದು ಗಲ್ಲಿ ಬಾಯ್ ಸಿನಿಮಾ ದಾಖಲೆಯೊಂದನ್ನು ಬರೆದಿದೆ. ಬರೋಬ್ಬರಿ 13 ಅವಾರ್ಡ್ಗಳನ್ನು ಬಾಚಿಕೊಂಡಿರುವ ಈ ಸಿನಿಮಾ ಇದುವರೆಗೂ ಬಾಲಿವುಡ್ನಲ್ಲಿ ಅತಿ ಹೆಚ್ಚು ಫಿಲಂಫೇರ್ ಅವಾರ್ಡ್ ಪಡೆದ ಸಿನಿಮಾ ಎನ್ನುವ ಹೆಮ್ಮೆಗೆ ಪಾತ್ರವಾಗಿದೆ. ಆದರೆ ಗಲ್ಲಿ ಬಾಯ್ಗೆ ಎಲ್ಲಾ ಅವಾರ್ಡ್ಗಳು ಹೋಗಿದ್ದು ತಮ್ಮ ನೆಚ್ಚಿನ ನಟ/ನಟಿಯ ಸಿನಿಮಾಕ್ಕೆ ಅವಾರ್ಡ್ ಸಿಕ್ಕಿಲ್ಲ ಎಂದು ಸಿಟ್ಟಿಗೆದ್ದಿರುವ ಅಭಿಮಾನಿಗಳು ಬಾಯ್ಕಾಟ್ ಫಿಲಂಫೇರ್ ಅಭಿಯಾನವನ್ನು ಆರಂಭಿಸಿದ್ದಾರೆ. #BoycottFilmfare ಎನ್ನುವ ಹ್ಯಾಷ್ಟ್ಯಾಗ್ನೊಂದಿಗೆ ಅಭಿಮಾನಿಗಳು ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದು, ನಿನ್ನೆ ಈ ಹ್ಯಾಷ್ಟ್ಯಾಗ್ ಟ್ರೆಂಡಿಂಗ್ ಲಿಸ್ಟ್ ಸೇರಿಕೊಂಡಿತ್ತು.
ಇದೀಗ #BoycottFilmfare ಅಭಿಯಾನದ ಬೆನ್ನಲ್ಲೇ ಸಲ್ಮಾನ್ ಖಾನ್ ಅವರ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದ ಮೂಲಕ ಫಿಲಂಫೇರ್ ಅವಾರ್ಡ್ ಬಗ್ಗೆ ತಮ್ಮ ಬೇಸರವನ್ನು ಸಲ್ಲು ಬಾಯ್ ಫ್ಯಾನ್ಸ್ ಹೊರಹಾಕುತ್ತಿದ್ದಾರೆ. (ಏಜೆನ್ಸೀಸ್)