

ಬೆಂಗಳೂರು: ಅಮೃತಾ ಅಯ್ಯಂಗಾರ್ ಸದ್ಯ ಭೂಮಿ ಮೇಲಿಲ್ಲ. ಅಂದರೆ, ಖುಷಿಯ ಮೋಡಗಳ ಮೇಲೆ ಕಾಲೂರಿ ತೇಲುತ್ತಿದ್ದಾರೆ. ಆ ಒಂದು ಕ್ಷಣಕ್ಕೆ ಕಾರಣವಾಗಿದ್ದು; ಅವರ ತ್ರಿವಳಿ ಸಿನಿಮಾಗಳು. ಕೇವಲ ಒಂದೂವರೆ ತಿಂಗಳ ಅವಧಿಯಲ್ಲಿ ಅಮೃತಾ ನಟನೆಯ ‘ಲವ್ ಮಾಕ್ಟೇಲ್’, ‘ಪಾಪ್ಕಾರ್ನ್ ಮಂಕಿ ಟೈಗರ್’ ಮತ್ತು ‘ಶಿವಾರ್ಜುನ’ ಚಿತ್ರಗಳು ಬಿಡುಗಡೆ ಆಗಿವೆ. ಒಳ್ಳೇ ಪ್ರತಿಕ್ರಿಯೆಯನ್ನೂ ಗಿಟ್ಟಿಸಿಕೊಂಡಿವೆ. ಆ ಖುಷಿಯನ್ನು ವಿಜಯವಾಣಿ ಜತೆಗೆ ಹಂಚಿಕೊಂಡಿದ್ದಾರೆ.
ಸಿನಿಮಾ ಬಿಡುಗಡೆ ಅಂದ ಮೇಲೆ ಕೌತುಕದ ಜತೆಗೆ ಅಲ್ಲೊಂದು ಕಾತುರ, ತುಡಿತ ಸಹಜ. ಸಿನಿಮಾ ಏನಾಗುತ್ತೋ, ಜನ ಹೇಗೆ ಪ್ರತಿಕ್ರಿಯಿಸುತ್ತಾರೋ ಎಂಬಿತ್ಯಾದಿ ತರಹೇವಾರಿ ಪ್ರಶ್ನೆಗಳೂ ತಲೆ ಸುತ್ತ ಗಿರಕಿ ಹೊಡೆಯುತ್ತಿರುತ್ತವೆ. ಹೀಗಿರುವಾಗ ಒಂದೂವರೆ ತಿಂಗಳಲ್ಲಿ ನಟಿಸಿದ ಮೂರು ಸಿನಿಮಾ ಬಿಡುಗಡೆ ಆದರೆ ಹೇಗಾಗಬೇಡ? ನಟಿ ಅಮೃತಾ ಅಯ್ಯಂಗಾರ್ಗೆ ಈಗ ಅಮೃತ ಸಿಕ್ಕಷ್ಟೇ ಸಂತಸದಲ್ಲಿದ್ದಾರೆ. ಅದಕ್ಕೆ ಕಾರಣ, ಒಂದೂವರೆ ತಿಂಗಳ ಅವಧಿಯಲ್ಲಿ ಅವರ ನಟನೆಯ ಮೂರು ಸಿನಿಮಾಗಳು ಬಿಡುಗಡೆ ಆಗಿವೆ. ಆ ಪೈಕಿ ಎರಡು ಸಿನಿಮಾಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕರೆ, ಇನ್ನೊಂದು ಕರೊನಾ ಭೀತಿಯಿಂದ ಪ್ರದರ್ಶನ ಮೊಟಕುಗೊಳಿಸಿದೆ.
ಹೌದು, ಈ ಹಿಂದೆ ‘ಸಿಂಹ ಹಾಕಿದ ಹೆಜ್ಜೆ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ನಟಿ ಅಮೃತಾಗೆ ಆ ಸಿನಿಮಾ ಅಷ್ಟೊಂದು ಹೆಸರು ತಂದುಕೊಡಲಿಲ್ಲ ಎಂಬುದಕ್ಕಿಂತ, ಚಿತ್ರ ಬಂದದ್ದೂ ಗೊತ್ತಾಗಲಿಲ್ಲ, ಹೋದದ್ದೂ ಗೊತ್ತಾಗಲಿಲ್ಲ. ಅದಾಗಿ ಎರಡು ವರ್ಷಗಳ ಬಳಿಕ ‘ಪಾಪ್ಕಾರ್ನ್ ಮಂಕಿ ಟೈಗರ್’ ಸಿನಿಮಾ ಅವಕಾಶ ಗಿಟ್ಟಿಸಿಕೊಂಡ ಅಮೃತಾ, ‘ಲವ್ ಮಾಕ್ಟೆಲ್’ ಚಿತ್ರಕ್ಕೂ ಆಯ್ಕೆಯಾಗುತ್ತಾರೆ. ಅದೇ ರೀತಿ ಶಿವತೇಜಸ್ ನಿರ್ದೇಶನದ ‘ಶಿವಾರ್ಜುನ’ ಸಿನಿಮಾದಲ್ಲಿಯೂ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ. ಇದೆಲ್ಲದರ ನಡುವೆ ಸದ್ಯ ಅಮೃತಾ ಬತ್ತಳಿಕೆಯಲ್ಲಿ ಎರಡ್ಮೂರು ಸಿನಿಮಾಗಳಿವೆ.
ಸಹಜವಾಗಿ ಕಷ್ಟಪಟ್ಟು ಮಾಡಿದ ಎಲ್ಲ ಸಿನಿಮಾಗಳು ಹೀಗೆ ರಪಕ್ಕನೆ ಬಂದು ಹೋಗುವ ಬದಲು, ತಿಂಗಳಿಗೊಂದು ಬಿಡುಗಡೆ ಆದರೆ ಚೆನ್ನ ಎಂಬುದು ಹಲವು ನಟ, ನಟಿಯರ ಅಭಿಪ್ರಾಯ. ಆದರೆ, ಒಂದೇ ತಿಂಗಳ ಅವಧಿಯಲ್ಲಿ ಮೂರು ಸಿನಿಮಾ ಬಂದಿದ್ದು ಅಮೃತಾ ಪಾಲಿಗೆ ಒಳ್ಳೆಯದೇ ಆಗಿದೆಯಂತೆ. ಕರಿಯರ್ನ ಮತ್ತೊಂದು ಮೆಟ್ಟಿಲೇರಲು ಅನುಕೂಲವಾಯಿತಂತೆ. ‘ಮೊದಲಿಗೆ ಎರಡೂ ಸಿನಿಮಾ ಒಟ್ಟಿಗೆ ಬಿಡುಗಡೆ ಆಗುತ್ತಿವೆ ಎಂದಾಗ ಭಯ ಇತ್ತು. ಆಮೇಲೆ ಇಂಥ ಅವಕಾಶ ಸಿಗುವುದು ತುಂಬ ವಿರಳ ಅನಿಸಿತು. ‘ಪಾಪ್ಕಾರ್ನ್ ಮಂಕಿ ಟೈಗರ್’ ಆಯ್ಕೆಯಾದ ಮೇಲೆ ‘ಲವ್ ಮಾಕ್ಟೇಲ್’ ಅವಕಾಶ ಸಿಕ್ತು. ಅವೆರಡರ ಜತೆಗೆ ‘ಶಿವಾರ್ಜುನ’. ಒಂದು ವೇಳೆ ‘ಲವ್ ಮಾಕ್ಟೆಲ್’ ಬಿಡುಗಡೆ ಆಗಿರಲಿಲ್ಲ. ಬರೀ ‘ಪಾಪ್ಕಾರ್ನ್’ ಬಿಡುಗಡೆ ಆಗಿದ್ದರೆ, ನಾನು ನೆನಪಿನಲ್ಲಿ ಉಳಿಯುತ್ತಿದ್ದೆನೋ ಇಲ್ಲವೊ ಗೊತ್ತಿಲ್ಲ. ಆದರೆ ಹಾಗಾಗಲಿಲ್ಲ. ‘ಪಾರ್ಪ್ಕಾರ್ನ್ನಲ್ಲಿ ನನ್ನನ್ನು ನೋಡಿ, ಇದು ‘ಲವ್ ಮಾಕ್ಟೇಲ್’ ಜೋ ಎಂದು ಕನೆಕ್ಟ್ ಮಾಡಿಕೊಂಡರು. ಸೋ ಅಲ್ಲಿಗೆ ನಾನು ಮತ್ತೆ ಎಲ್ಲರ ನೆನೆಪಿನಲ್ಲಿ ಉಳಿದೆ. ಇವೆರಡು ಸದ್ದು ಮಾಡುತ್ತಿರುವ ಹೊತ್ತಲ್ಲೇ ‘ಶಿವಾರ್ಜುನ’ ಸಿನಿಮಾ ಬಂತು ...’ ಹೀಗೆ ಆಗಿದ್ದೆಲ್ಲ ಒಳ್ಳೆಯದೇ ಎಂಬುದು ಅಮೃತಾ ಮಾತಿನ ತಾತ್ಪರ್ಯ.
ಕೆಲ ದಿನಗಳ ಅವಧಿಯಲ್ಲಿ ಮೂರು ಸಿನಿಮಾ ಬಂದರೂ, ಎಲ್ಲ ಸಿನಿಮಾಗಳಲ್ಲಿ ಅಮೃತಾ ನಿಭಾಯಿಸಿದ ಪಾತ್ರಗಳು ಒಂದಕ್ಕೊಂದು ವಿಭಿನ್ನ. ‘ಒಟ್ಟೊಟ್ಟಿಗೆ ಮೂರು ಸಿನಿಮಾ ಬಿಡುಗಡೆಯಾದರೂ, ಪ್ರತಿ ಸಿನಿಮಾದಲ್ಲಿ ನಾನು ಮಾಡಿರುವ ಪಾತ್ರಕ್ಕೆ ಒಂದಕ್ಕೊಂದು ಲಿಂಕ್ ಇಲ್ಲ. ‘ಮಾಕ್ಟೇಲ್’ನಲ್ಲಿ ಆಟಿಟ್ಯೂಡ್ ಇರೋ ಹುಡುಗಿ ರೀತಿ ಕಾಣಿಸಿದರೆ, ‘ಪಾಪ್ಕಾರ್ನ್’ನಲ್ಲಿ ಗರ್ಭಿಣಿ ಸೇರಿ ಹಲವು ಶೇಡ್ಗಳಿದ್ದವು. ಅದೇ ರೀತಿ ‘ಶಿವಾರ್ಜುನ’ದಲ್ಲಿ ಹಳ್ಳಿ ಹುಡುಗಿಯ ಲುಕ್ ಇತ್ತು. ಇದೀಗ ಅಭಿನಯಿಸುತ್ತಿರುವ ‘ಬಡವ ರಾಸ್ಕಲ್’, ‘ವಿಂಡೋ ಸೀಟ್’ ಮತ್ತು ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿಕೊಂಡಿರುವ ‘ಓ’ ಚಿತ್ರಗಳಲ್ಲಿಯೂ ಭಿನ್ನತೆ ಇದೆ. ಆ ಪ್ರಕ್ರಿಯೆ ಹೀಗೆ ಮುಂದುವರಿಯಲಿದೆ’ ಎಂದು ಅಮೃತಾ ಹೇಳಿಕೊಳ್ಳುತ್ತಾರೆ.
‘ಇಲ್ಲಿಯವರೆಗೂ ಮಾಡಿದ ಪಾತ್ರಗಳೆಲ್ಲವೂ ವಿಭಿನ್ನ ಮತ್ತು ವಿಶೇಷ. ಮಾಡಿದ ಪಾತ್ರ ಮನಸ್ಸಿನಲ್ಲಿ ಉಳಿಯಬೇಕು ಎಂಬ ಕಾರಣಕ್ಕೆ ರೆಗ್ಯುಲರ್ ಶೈಲಿಯನ್ನು ಬದಿಗಿಟ್ಟು ಹೊಸತನ್ನು ಆಯ್ದುಕೊಂಡಿದ್ದೆ. ಪ್ರತಿ ಮನೆಗಳಲ್ಲೂ ಅದು ಚರ್ಚೆಗೊಳಗಾಗಬೇಕು. ಸದ್ಯ ಅದು ವರ್ಕೌಟ್ ಆಗಿದೆ. ಹಾಗಾಗಿ ಪಾತ್ರ ಪೋಷಣೆಯಲ್ಲಿ ಏನಾದರೂ ಹೊಸತನ್ನು ನೀಡಬೇಕು ಮತ್ತು ಅದರ ಮೂಲಕವೇ ಗುರುತಿಸಿಕೊಳ್ಳಬೇಕೆಂಬ ಆಸೆ ನನ್ನದು. ಅದೇ ರೀತಿ ಹೊಸ ಸಿನಿಮಾಗಳಿಗೆ ಬೇರೆ ಯಾರಾದರೂ ನನ್ನನ್ನು ಆಯ್ದುಕೊಳ್ಳಬೇಕೆಂದರೆ, ಈವರೆಗಿನ ನನ್ನ ಸಿನಿಮಾಗಳನ್ನು ನೋಡಿದರೆ ಸಾಕು. ಇನ್ನೊಂದು ಖುಷಿಯ ವಿಚಾರ ಏನೆಂದರೆ, ‘ಈ ಪಾತ್ರ ನಿಮಗೆ ಸೂಟ್ ಆಗುತ್ತೆ’ ಎಂದು ಯಾರೂ ಬರುತ್ತಿಲ್ಲ. ಬದಲಿಗೆ ‘ಈ ಪಾತ್ರವನ್ನು ನೀವು ಪಕ್ಕಾ ಮಾಡುತ್ತೀರಿ’ ಎಂದು ಸಾಕಷ್ಟು ನಿರ್ದೇಶಕರು ಹೇಳುತ್ತಿದ್ದಾರೆ. ಹಾಗಾಗಿ ಸಮ್ಂಗ್ ಡಿಫರೆಂಟ್ ಮೊರೆ ಹೋಗುತ್ತಿದ್ದೇನೆ. ಪಾತ್ರ ಸಿಂಪಲ್ ಇದ್ದರೂ, ಅದನ್ನು ಏನಾದರೂ ಎಕ್ಸ್ಟಾಡಿನರಿ ಮಾಡಬೇಕು ಅಂದು ಕೊಂಡಿದ್ದೇನೆ’ ಎನ್ನುತ್ತಾರೆ.
ನಟನೆಗೆ ಬಂದಿದ್ದು ಅನಿರೀಕ್ಷಿತ...
ನಟಿ ಅಮೃತಾ ಸಿನಿಮಾ ಹಿನ್ನೆಲೆಯಿಂದ ಬಂದವರಾ? ಅದಕ್ಕೆ ಅವರೇ ಹೀಗೆ ಉತ್ತರಿಸಿದ್ದಾರೆ. ‘ನನ್ನ ಅಕ್ಕ ಎನ್ಜಿಒದಲ್ಲಿ ಕೆಲಸ ಮಾಡುತ್ತಾರೆ. ಆಗಾಗ ನಾಟಕ ಅದೂ ಇದೂ ಎಂದೆಲ್ಲ ಅವಳು ಬಿಜಿ. ಅದೇ ರೀತಿ ಗೀತ ಸಾಹಿತಿ ಕೆ. ಕಲ್ಯಾಣ್ ನಮ್ಮ ಮಾವ. ಹಾಗಾಗಿ ನನಗೂ ಸ್ವಲ್ಪ ನಟನೆ ಕಡೆ ಒಲವಿದೆ. ಮೊದಮೊದಲಿಗೆ ನಟಿಯಾಗಿ ಗುರುತಿಸಿಕೊಳ್ಳಬೇಕೆಂದುಕೊಂಡಿರಲಿಲ್ಲ. ಸೈಕಾಲಜಿ ಓದಿದ್ದರಿಂದ ಅಕ್ಕನ ಜತೆ ಒಂದಷ್ಟು ದಿನ ಕಾಲಕಳೆದೆ. ಆಮೇಲೆ ಅನಿರೀಕ್ಷಿತವಾಗಿ ಸಿನಿಮಾ ಸಿಕ್ಕಿತು. ಸಿನಿಮಾಗೆ ಬಂದ ಆರಂಭದಲ್ಲೇ ಯಶಸ್ಸು ಸಿಗುತ್ತದೆ, ಜನ ಗುರುತಿಸುತ್ತಾರೆ ಎಂದು ನಾನು ಯಾವತ್ತೂ ಅಂದುಕೊಂಡಿರಲಿಲ್ಲ. ಈಗ ಅದೆಲ್ಲವೂ ಅನಿರೀಕ್ಷಿತವಾಗಿಯೇ ದಕ್ಕಿದೆ. ಅಷ್ಟೇ ಜೋಪಾನವಾಗಿ ಅದನ್ನು ಕಾಪಾಡಿಕೊಂಡು ಹೋಗುತ್ತೇನೆ’ ಎನ್ನುತ್ತಾರೆ. ಕನ್ನಡದಲ್ಲಿ ಗುರುತಿಸಿಕೊಂಡ ಅದೆಷ್ಟೋ ನಟಿಯರು ಪರಭಾಷೆಗಳಿಗೆ ಹೋಗಿದ್ದಾರೆ. ಸದ್ಯಕ್ಕೆ ಆ ಯಾವ ವಿಚಾರವೂ ಅಮೃತಾ ಅವರಲ್ಲಿ ಇಲ್ಲವಂತೆ. ‘ಕನ್ನಡದಲ್ಲಿ ನಟಿಯರಿದ್ದೇವೆ ಎಂಬುದನ್ನು ಮೊದಲು ನಮ್ಮವರಿಗೆ ತೋರಿಸಬೇಕು. ಏಕೆಂದರೆ, ನಮ್ಮ ಸಿನಿಮಾಗಳಿಗೆ ಇಲ್ಲಿನ ನಟಿಯರಿಗಿಂತ ಪರಭಾಷಿಕರನ್ನೇ ಆಯ್ದುಕೊಳ್ಳಲಾಗುತ್ತಿದೆ’ ಎನ್ನುವ ಅವರು, ಪ್ರಸ್ತುತ ಚಿತ್ರರಂಗ ಹೊಸಬರನ್ನು ನೋಡುತ್ತಿರುವ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಸ್ಯಾಂಡಲ್ವುಡ್ನಲ್ಲಿ ಹೊಸಬರನ್ನು ಟ್ರೀಟ್ ಮಾಡುವ ರೀತಿ ಬೇರೆ ಥರ ಇದೆ. ಅದನ್ನು ನೋಡಿದರೆ ಬೇಜಾರಾಗುತ್ತದೆ’ ಎಂದು ಮಾತು ಮುಗಿಸುತ್ತಾರೆ ಅಮೃತಾ.
ಮಂಜು ಕೊಟಗುಣಸಿ