

ಬೆಂಗಳೂರು: ಪುನೀತ್ ಅಭಿನಯದ ಕೊನೆಯ ಚಿತ್ರ 'ಗಂಧದ ಗುಡಿ' ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇಂದು ಸಂಜೆ ಚಿತ್ರದ ಪೇಯ್ಡ್ ಪ್ರೀಮಿಯರ್ ಶೋಗಳು ನಡೆಯಲಿದ್ದು, ಈಗಾಗಲೇ ಟಿಕೆಟ್ಗಳು ಸೋಲ್ಡ್ ಔಟ್ ಆಗಿವೆ.
ಇದುವರೆಗೂ ಪುನೀತ್ ರಾಜಕುಮಾರ್ ಸಾಕಷ್ಟು ಕಮರ್ಷಿಯಲ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಯಾವ ಜಾನರ್ನ ಚಿತ್ರ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಇದೆ. ಆದರೆ, ಈ ಫಾರ್ಮಾಟ್ಗೆ ಏನು ಹೆಸರಿಡಬಹುದು ಎಂದು ತಮಗೂ ಗೊತ್ತಿಲ್ಲ ಎನ್ನುತ್ತಾರೆ ಚಿತ್ರದ ನಿರ್ದೇಶಕ ಅಮೋಘವರ್ಷ.
ಈ ಕುರಿತು ಮಾತನಾಡಿರುವ ಅವರು, 'ಇದು ಕಮರ್ಷಿಯಲ್ ಚಿತ್ರವೋ, ಅಲ್ಲವೋ ಎಂದು ಹೇಳುವುದು ಕಷ್ಟ. ಇದು ಎಲ್ಲರಿಗೂ ಇಷ್ಟವಾಗುವ ಸಿನಿಮಾ ಎಂದಷ್ಟೇ ಹೇಳಬಲ್ಲೆ. ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಬೇರೆಬೇರೆ ಶೈಲಿಯ ಒಳ್ಳೆಯ ಕಂಟೆಂಟ್ ಇರುವ ಸಿನಿಮಾಗಳು ಬರುತ್ತಿವೆ. ಇದು ಸಹ ವಿಭಿನ್ನವಾದ ಚಿತ್ರ. ಇದೊಂದು ಚಿತ್ರ ಎನ್ನುವುದಕ್ಕಿಂತ ಇದೊಂದು ಅನುಭವ ಎಂದರೆ ತಪ್ಪಿಲ್ಲ. ಗಂಧದಗುಡಿಯನ್ನು ಅಪ್ಪು ಅವರ ಕಣ್ಣಲ್ಲಿ ನೋಡುವ ಒಂದು ವಿಭಿನ್ನವಾದ ಅನುಭವ. ಈ ಫಾರ್ಮಾಟ್ಗೆ ಏನು ಹೆಸರಿಡಬೇಕು ಅಂತ ನನಗೆ ನಿಜವಾಗಲೂ ಗೊತ್ತಿಲ್ಲ. ಈ ತರಹದ ಫಾರ್ಮೆಟ್ನ ಚಿತ್ರವನ್ನು ನಾನು ಇದುವರೆಗೂ ಎಲ್ಲೂ ನೋಡಿಲ್ಲ' ಎನ್ನುತ್ತಾರೆ ಅಮೋಘವರ್ಷ.
ಇನ್ನು, ಈ ಚಿತ್ರದಲ್ಲಿ ಪುನೀತ್ ಅವರ ಧ್ವನಿ ಇದೆಯೋ ಅಥವಾ ಅವರ ಪಾತ್ರಕ್ಕೆ ಬೇರೆ ಯಾರಾದರೂ ಡಬ್ ಮಾಡಿದ್ದಾರಾ? ಎಂಬ ಪ್ರಶ್ನೆಯೂ ಹಲವರಲ್ಲಿದೆ. ಅಮೋಘವರ್ಷ ಹೇಳುವಂತೆ ಈ ಚಿತ್ರಕ್ಕೆ ಪುನೀತ್ ಅವರ ಧ್ವನಿಯೇ ಇರಲಿದೆಯಂತೆ. ಶೂಟಿಂಗ್ ಸಂದರ್ಭದಲ್ಲಿ ಅವರು ಮಾತನಾಡಿದ್ದನ್ನೇ (ಸಿಂಕ್ ಸೌಂಡ್) ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆಯಂತೆ.