ಸಂಗೀತ ನಿರ್ದೇಶಕರಾದ ಬಿಗ್ ಬಿ ಚುಪ್ ಚಿತ್ರಕ್ಕೆ ಶೀರ್ಷಿಕೆ ಗೀತೆ ಸಂಯೋಜನೆ

Amitabh Bachan
Published on

‘ಚೀನಿ ಕಮ್ ಖ್ಯಾತಿಯ ಆರ್. ಬಾಲ್ಕಿ ನಿರ್ದೇಶನದ ‘ಚುಪ್’ ಚಿತ್ರ ಸದ್ದಿಲ್ಲದೆ ಮುಕ್ತಾಯ ವಾಗಿದೆ. ಸೆ. 23ಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ. ಬಾಲ್ಕಿ ನಿರ್ದೇಶನದ ಚಿತ್ರದಲ್ಲಿ ಬಾಲಿವುಡ್ ‘ಬಿಗ್ ಬಿ’ ಅಮಿತಾಭ್ ಬಚ್ಚನ್ ಸಾಮಾನ್ಯವಾಗಿ ಇದ್ದೇ ಇರುತ್ತಾರೆ. ‘ಚೀನಿ ಕಮ್ ಇರಲಿ, ‘ಪಾ’, ‘ಶಮಿತಾಭ್’ ಆಗಲೀ ಎಲ್ಲ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದರು. ಆದರೆ, ‘ಚುಪ್’ ಚಿತ್ರದಲ್ಲಿ ಮಾತ್ರ ಅವರಿಲ್ಲ. ಪೋಸ್ಟರ್​ನಲ್ಲಿ ಸನ್ನಿ ಡಿಯೋಲ್, ದುಲ್ಕರ್ ಸಲ್ಮಾನ್, ಪೂಜಾ ಭಟ್ ಮುಂತಾದವರು ಕಾಣಿಸುತ್ತಾರೆ. ಹಾಗಾದರೆ, ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಇರುವುದಿಲ್ಲವಾ? ಎಂಬ ಪ್ರಶ್ನೆಗೆ, ನಟರಾಗಿ ಇರುವುದಿಲ್ಲ ಸಂಗೀತ ನಿರ್ದೇಶಕರಾಗಿ ಇರುತ್ತಾರೆ ಎಂದು ಉತ್ತರಿಸುತ್ತಾರೆ ಬಾಲ್ಕಿ.

ಹೌದು, ‘ಚುಪ್’ ಚಿತ್ರದ ಮೂಲಕ ಬಚ್ಚನ್ ಸಂಗೀತ ನಿರ್ದೇಶಕರಾಗಿ ಎಂಟ್ರಿ ಕೊಡುತ್ತಿದ್ದಾರೆ. ಚಿತ್ರದ ಶೀರ್ಷಿಕೆ ಗೀತೆಯನ್ನು ಅವರು ಕಂಪೋಸ್ ಮಾಡಿದ್ದಾರೆ. ಈ ಕುರಿತು ಮಾತನಾಡುವ ಬಾಲ್ಕಿ, ‘ಈ ಚಿತ್ರವನ್ನು ಬಚ್ಚನ್​ಗೆ ತೋರಿಸಿದೆವು. ಅದನ್ನು ನೋಡಿ, ಅವರು ಪಿಯಾನೋದಲ್ಲಿ ಒಂದು ಟ್ಯೂನ್ ನುಡಿಸಿದರು. ಆ ಟ್ಯೂನ್​ನ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು. ಆ ಟ್ಯೂನ್ ಅದ್ಭುತವಾಗಿದೆ ಎಂಬ ಕಾರಣಕ್ಕೆ ಅದನ್ನು ಚಿತ್ರದ ಅಂತ್ಯದಲ್ಲಿ ಶೀರ್ಷಿಕೆ ಗೀತೆಯನ್ನಾಗಿ ಬಳಸಿಕೊಂಡಿದ್ದೇವೆ’ ಎನ್ನುತ್ತಾರೆ ಬಾಲ್ಕಿ. ‘ಚುಪ್’ ಒಂದು ಸೈಕೋ ಥ್ರಿಲ್ಲರ್ ಆಗಿದ್ದು, ನಿರ್ದೇಶನದ ಜತೆಗೆ ಚಿತ್ರದ ಕಥೆಯ ಜವಾಬ್ದಾರಿಯನ್ನೂ ಅವರೇ ಹೊತ್ತಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net