

ಬೆಂಗಳೂರು: ಮೈಸೂರು ಮೂಲದ ಎಂ.ಎಸ್. ಗುರುರಾಜ ರಾವ್ ನಿರ್ಮಿಸಿ, ನಿರ್ದೇಶಿಸುತ್ತಿರುವ ಭಕ್ತಿ ಪ್ರಧಾನ ಸಿನಿಮಾ ‘ಅಮಲಾಮೃತ’. ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಅವತಾರಗಳ ಕುರಿತಂತೆ ಬೆಳಕು ಚೆಲ್ಲುವ ಚಿತ್ರ ಇದಾಗಿದೆ. ಇತ್ತೀಚೆಗೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಚಿತ್ರದ ಧ್ವನಿ ಸುರುಳಿ ಬಿಡುಗಡೆ ಮಾಡಿ, ‘ಪ್ರಸ್ತುತ ಸಮಾಜದಲ್ಲಿ ಅಡಕವಾಗಿರುವಂತಹ ಭಕ್ತಿಯ ಪ್ರಚೋದನೆ, ಭಗವಂತನ ಅನುಗ್ರಹ ಇದ್ದಾಗ ಮಾತ್ರ ಎಲ್ಲ ಪ್ರಯತ್ನಗಳು ಸಫಲವಾಗುತ್ತವೆ. ದೇವರ ಭಕ್ತಿ, ಶಕ್ತಿ ಬೇಕು ಎಂದರೆ ಭಜನೆ ಮಾಡೋಣ. ‘ಅಮಲಾಮೃತ’ ಚಿತ್ರ ಹೆಚ್ಚು ಜನರನ್ನು ತಲುಪಲಿ’ ಎಂದು ಚಿತ್ರತಂಡಕ್ಕೆ ಆಶೀರ್ವದಿಸಿದರು. ಗುರುರಾಜ ರಾವ್, ‘ನವ ಭಕ್ತಿಯ ಜ್ಞಾನಯಜ್ಞದ ಲಕ್ಕೆ ಅಮಲ ಅಂತಲೂ, ಅದರ ಸಾರಕ್ಕೆ ಅಮೃತ ಎಂದು ಕರೆಯುತ್ತಾರೆ. ಈ ನವಭಕ್ತಿಯಿಂದ 64 ವಿದ್ಯೆಗಳನ್ನು ಕಲಿತವರು ಶ್ರೀ ರಾಘವೇಂದ್ರ ಸ್ವಾಮಿಗಳು. ಅವರು ಪೂರ್ವಪರದಲ್ಲಿ ಐದು ಅವತಾರಗಳಲ್ಲಿ ಕಾಣಿಸಿಕೊಂಡಿದ್ದರು. ಕರ್ಮಜ ದೇವತೆ, ಭಕ್ತ ಪ್ರಹ್ಲಾದ, ಬಾಹ್ಲೀಕ ರಾಜ, ವ್ಯಾಸರಾಜ ಕೊನೆಯದಾಗಿ ಗುರುಸಾರ್ವಭೌಮ. ಇವೆಲ್ಲವು ಹುಟ್ಟಿಕೊಂಡ ಬಗೆ ಹೇಗೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ’ ಎಂದು ಮಾಹಿತಿ ನೀಡಿದರು. ಕೆ.ಎಸ್.ಗೋವಿಂದರಾಮರಾವ್ ಬಾಹ್ಲೀಕರಾಜ, ವ್ಯಾಸರಾಜ ಹಾಗೂ ರಾಘವೇಂದ್ರ ಸ್ವಾಮಿಗಳಾಗಿ ಅಭಿನಯಿಸಿದ್ದಾರೆ. ವೀರೇಂದ್ರ ಆಚಾರ್ಯ, ಸುಬ್ಬರಾವ್, ಮಾ. ಸುಚೇಂದ್ರ, ಚೈತ್ರಾ ಭಾರದ್ವಾಜ್, ಯಶಸ್ ಕಲಾ ಬಳಗದಲ್ಲಿದ್ದಾರೆ. ಚನ್ನಪಟ್ಟಣ, ಅಬ್ಬೂರುಪೇಟೆ, ಶ್ರೀರಂಗಂ, ಕುಂಬಕೋಣಂ, ಶ್ರೀಮುಷ್ಣಂ, ಮುನ್ನಾರ್‌ಗುಡಿ, ಚಿಂತಾಮಣಿಯಲ್ಲಿ ಶೂಟಿಂಗ್ ನಡೆಸಲಾಗಿದ್ದು, ನವೆಂಬರ್‌ನಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.