

ಕಳೆದ ಕೆಲವು ತಿಂಗಳುಗಳಲ್ಲಿ ತನ್ನದಲ್ಲದ ತಪ್ಪಿಗೆ ಜನರಿಂದ ಸಿಕ್ಕಾಪಟ್ಟೆ ನಿಂದನೆಗೊಳಗಾದ ಒಬ್ಬ ವ್ಯಕ್ತಿ ಎಂದರೆ ಅದು ಕರಣ್ ಜೋಹರ್. ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ನಂತರ ಬಾಲಿವುಡ್ನಲ್ಲಿ ನೆಪೋಟಿಸಂ (ಸ್ವಜನಪಕ್ಷಪಾತ)ದ ವಿಷಯವಾಗಿ ಸಾಕಷ್ಟು ಸುದ್ದಿಯಾಯಿತು. ಸ್ವಜನಪಕ್ಷಪಾತವನ್ನು ಕರಣ್ ಪೋಷಿಸುತ್ತಾರೆ ಎಂಬ ಕಾರಣಕ್ಕೆ ಜನರೆಲ್ಲಾ ಅವರ ಮೇಲೆ ಮುಗಿಬಿದ್ದರು.
ಆಮೇಲೆ ಏನೆಲ್ಲಾ ಆಯಿತೆಂದು ಗೊತ್ತಿರಬಹುದು. ಈಗ ಅದೆಲ್ಲಾ ಹಳೆಯ ಕಥೆಯನ್ನು ಮರೆಯುವುದಕ್ಕೆ ಕರಣ್ ತೀರ್ಮಾನಿಸಿದ್ದಾರಂತೆ. ಒಂದಿಷ್ಟು ಹೊಸ ಚಿತ್ರಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ತೀರ್ಮಾನಿಸಿದ್ದಾರಂತೆ. ಈಗಾಗಲೇ ವರುಣ್ ಧವನ್ ಮತ್ತು ಕಿಯಾರಾ ಅಡ್ವಾಣಿ ಅಭಿನಯದಲ್ಲಿ ಅವರೊಂದು ಚಿತ್ರ ನಿರ್ಮಿಸುತ್ತಿರುವ ಸುದ್ದಿ ಇದೆ.
ಈಗ ಅವರು ರಣ್ವೀರ್ ಸಿಂಗ್ ಮತ್ತು ಆಲಿಯಾ ಭಟ್ ಅಭಿನಯದಲ್ಲಿ ಒಂದು ಚಿತ್ರ ನಿರ್ದೇಶಿಸುತ್ತಿರುವ ಫ್ರೆಶ್ ಸುದ್ದಿಯೊಂದು ಬಾಲಿವುಡ್ ಅಂಗಳದಿಂದ ಬಂದಿದೆ.
ಈ ಹಿಂದೆ ರಣ್ವೀರ್ ಸಿಂಗ್ ಮತ್ತು ಆಲಿಯಾ ಭಟ್ ಅಭಿನಯದಲ್ಲಿ 'ತಖ್ತ್' ಎಂಬ ಚಿತ್ರ ಘೋಷಿಸಿದ್ದರು ಕರಣ್. ಈ ಚಿತ್ರದಲ್ಲಿ ಅವರಿಬ್ಬರಷ್ಟೇ ಅಲ್ಲ, ಅನಿಲ್ ಕಪೂರ್, ಕರೀನಾ ಕಪೂರ್, ವಿಕ್ಕಿ ಕೌಶಾಲ್, ಜಾಹ್ನವಿ ಕಪೂರ್ ಸೇರಿದಂತೆ ಹಲವು ಕಲಾವಿದರಿದ್ದರು. ಇದೊಂದು ದೊಡ್ಡ ಬಜೆಟ್ನ ಐತಿಹಾಸಿಕ ಚಿತ್ರವಾಗಿತ್ತು. ಚಿತ್ರವನ್ನು ಅವರು ಶುರು ಮಾಡಿದ್ದಾರಾದರೂ, ಕಾರಣಾಂತರಗಳಿಂದ ಚಿತ್ರ ಮುಂದುವರೆಯುತ್ತಲೇ ಇಲ್ಲ.
ಹಾಗಾಗಿ ಅದನ್ನು ಮುಂದಕ್ಕೆ ಹಾಕಿ, ಆ ಜಾಗದಲ್ಲಿ ಇನ್ನೊಂದು ಸಣ್ಣ ಬಜೆಟ್ ರೊಮ್ಯಾಂಟಿಕ್ ಕಾಮಿಡಿ ಮಾಡುವ ಯೋಚನೆ ಅವರದು. ಅಂಥದ್ದೊಂದು ಕಥೆ ಸಿದ್ಧವಾಗುತ್ತಿದ್ದಂತೆಯೇ ಅವರು ರಣ್ವೀರ್ ಕಪೂರ್ನ ಕೇಳಿದ್ದಾರೆ. ರಣ್ವೀರ್ ಎಸ್ ಅಂದಿದ್ದೇ ತಡ, ಆಲಿಯಾ ಅವರನ್ನು ಕ್ಯಾಚ್ ಹಾಕಿಕೊಳ್ಳಲಾಗಿದೆ.
ಅಲ್ಲಿಗೆ, 'ಗಲ್ಲಿ ಬಾಯ್' ಚಿತ್ರದ ನಂತರ ರಣ್ವೀರ್ ಮತ್ತು ಆಲಿಯಾ ಇಬ್ಬರೂ, 'ತಖ್ತ್' ಚಿತ್ರದಲ್ಲಿ ಜತೆಯಾಗುತ್ತಾರೆ ಎಂದು ಹೇಳಲಾಗಿತ್ತು. ಈಗ ಅದಕ್ಕೂ ಮುನ್ನವೇ, ಇಬ್ಬರೂ ಇನ್ನೊಂದು ರೊಮ್ಯಾಂಟಿಕ್ ಕಾಮಿಡಿ ಮೂಲಕ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ.