ಮಾಲ್ಡೀವ್ಸ್​ನಿಂದ ವಾಪಸ್ಸಾದ ರಣಬೀರ್-ಆಲಿಯಾ, ಟೈಗರ್​-ದಿಶಾ

Alia Bhatt - Disha - Final
Published on

ಮುಂಬೈ: ಬಾಲಿವುಡ್​ನ ಜನಪ್ರಿಯ ಜೋಡಿಗಳಾದ ರಣಬೀರ್-ಆಲಿಯಾ ಮತ್ತು ಟೈಗರ್​-ದಿಶಾ ಇದೀಗ ಮುಂಬೈಗೆ ವಾಪಸ್ಸಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಮಾಲ್ಡೀವ್ಸ್​ನಲ್ಲಿ ಮೋಜು-ಮಸ್ತಿ ಮಾಡುತ್ತಿದ್ದ ಈ ಜೋಡಿಗಳು, ಅಲ್ಲಿ ಪ್ರಯಾಣಕ್ಕೆ ನಿಷೇಧ ಹೇರಿದ ಹಿನ್ನೆಲೆಯಲ್ಲಿ ತವರಿಗೆ ಮರಳಿದ್ದಾರೆ.

ಮುಂಬೈನಲ್ಲಿ ಕರೊನಾ ಎರಡನೇ ಅಲೆ ಹೆಚ್ಚಾದ ಹಿನ್ನೆಲೆಯಲ್ಲಿ ರಣಬೀರ್​ ಕಪೂರ್​ ಮತ್ತು ಆಲಿಯಾ ಭಟ್​ ಹಾಗೂ ಟೈಗರ್​ ಶ್ರಾಫ್​ ಮತ್ತು ದಿಶಾ ಪಠಾಣಿ ಮಾಲ್ಡೀವ್ಸ್​ಗೆ ಹೋಗಿದ್ದರು. ಅಲ್ಲಿನ ಸಮುದ್ರದಡದಲ್ಲಿ ಹಲವು ಫೋಟೋಗಳನ್ನು ಕ್ಲಿಕ್ಕಿಸಿ, ಅದನ್ನು ಸೋಷಿಯಲ್​ ಮೀಡಿಯಾ ಮೂಲಕ ಹಂಚಿಕೊಂಡಿದ್ದರು.

ಈ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು. ಇಲ್ಲಿ ಭಾರತದಲ್ಲಿ ಜನ ಕೋವಿಡ್​ ಚಿಕಿತ್ಸೆ ಮತ್ತು ಆಕ್ಸಿಜನ್​ಗೆ ಪರದಾಡುತ್ತಿರುವಾಗ, ಜವಾಬ್ದಾರಿಯಿಂದ ವರ್ತಿಸಬೇಕಾದ ಸೆಲೆಬ್ರಿಟಿಗಳು ಅರೆಬೆತ್ತಲೆಯಾಗಿ ಫೋಟೋಗಳನ್ನು ಹಂಚಿಕೊಳ್ಳುವುದು ಎಷ್ಟು ಸಮಂಜಸ ಎಂದು ಹಲವರು ಈ ಸೆಲೆಬ್ರಿಟಿಗಳ ಕಾಲೆಳೆದಿದ್ದರು. ಬಾಲಿವುಡ್​ ನಟ ನವಾಜುದ್ದೀನ್​ ಸಿದ್ಧೀಖಿ ಸಹ, ನಿಮ್ಮ ದೇಶದಲ್ಲಿ ಆಹಾಕಾರ ಎದ್ದಿರುವಾಗ, ನೀವು ಈ ರೀತಿ ಶೋಕಿ ಮಾಡುವುದು ಸರಿಯಲ್ಲ ಎಂದಿದ್ದರು.

ಈ ಮಧ್ಯೆ, ಭಾರತೀಯರು ಹೆಚ್ಚು ಸಂಖ್ಯೆಯಲ್ಲಿ ಬರುತ್ತಿರುವ ಹಿನ್ನೆಲೆಯಲ್ಲಿ ಮಾಲ್ಡೀವ್ಸ್​ನಲ್ಲಿ ನಿಷೇಧ ಹೇರಲಾಯಿತು. ಭಾರತ ಸೇರಿದಂತೆ ಹಲವು ದೇಶಗಳ ಫ್ಲೈಟ್​ಗಳಿಗೆ ನಿಷೇಧ ಹೇರಿತು. ಈ ಹಿನ್ನೆಲೆಯಲ್ಲಿ ಮಾಲ್ಡೀವ್ಸ್​ನಲ್ಲಿದ್ದ ಬಾಲಿವುಡ್​ ಸೆಲೆಬ್ರಿಟಿಗಳೆಲ್ಲ ಇದೀಗ ತವರಿಗೆ ಮರಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net