ಅಸ್ಸಾಂನಲ್ಲಿ ಜಲರಾಕ್ಷಸನ ರೌದ್ರನರ್ತನ: ಸಂತ್ರಸ್ತರ ಬೆನ್ನಿಗೆ ನಿಲ್ಲಲು ಕರೆ ನೀಡಿದ ನಟಿ ಆಲಿಯಾ ಭಟ್​! Alia Bhatt

Alia Bhatt  ಚಿತ್ರ Instagram
Alia Bhatt ಚಿತ್ರ Instagram
Published on
Alia Bhatt: ಅಸ್ಸಾಂನಲ್ಲಿ ಉಂಟಾಗಿರುವ ಭೀಕರ ಪ್ರವಾಹ ಪರಿಸ್ಥಿತಿಯ ಬಗ್ಗೆ ಬಾಲಿವುಡ್ ನಟಿ ಆಲಿಯಾ ಭಟ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ನೆರೆಯಿಂದ ತೀವ್ರ ವಿಚಲಿತರಾಗಿರುವ ಅವರು, ಸಾಮಾಜಿಕ ಜಾಲತಾಣಗಳ ಮೂಲಕ ಸಂತ್ರಸ್ತರೊಂದಿಗೆ ಒಗ್ಗಟ್ಟು ಪ್ರಕಟಿಸಿದ್ದಾರೆ.
ಪ್ರಸ್ತುತ ಸಾಗುತ್ತಿರುವ ಪರಿಹಾರ ಕಾರ್ಯಾಚರಣೆಗಳಿಗೆ ಬೆಂಬಲ ನೀಡಿ, ನೆರವಿನ ಹಸ್ತ ಚಾಚುವಂತೆ ತಮ್ಮ ಅನುಯಾಯಿಗಳಲ್ಲಿ ಮನವಿ ಮಾಡಿದ್ದಾರೆ. ಪ್ರತಿ ವರ್ಷ ಪ್ರವಾಹ ಸಂಭವಿಸುತ್ತಿದ್ದರೂ, ಪ್ರಕೃತಿಯ ಈ ಬಿಕ್ಕಟ್ಟಿನ ಸ್ವರೂಪ ಹಾಗೂ ಭೀಕರತೆ "ಇನ್ನೂ ನಮ್ಮನ್ನು ಆಶ್ಚರ್ಯಚಕಿತಗೊಳಿಸುತ್ತದೆ" ಎಂದು ನಟಿ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.

ಆಲಿಯಾ ಭಟ್ ಮನವಿ ಮಾಡಿದ್ದೇನು?

ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಶೇಷ ಟಿಪ್ಪಣಿಯೊಂದನ್ನು ಹಂಚಿಕೊಂಡಿರುವ ಆಲಿಯಾ, ದೇಶದ ಹಲವು ಭಾಗಗಳಲ್ಲಿ ಪ್ರವಾಹ ಹಾನಿ ಎಸಗಿದ್ದರೂ, ಅಸ್ಸಾಂ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದಿದ್ದಾರೆ.
ಪ್ರವಾಹದಿಂದಾಗಿ 60ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಲಕ್ಷಾಂತರ ಜನರು ನಿರಾಶ್ರಿತರಾಗಿದ್ದು, ಮನೆ, ಜಮೀನು, ಸಾಕುಪ್ರಾಣಿಗಳನ್ನು ಕಳೆದುಕೊಂಡಿದ್ದಾರೆ. ಕೆಲವರಂತೂ ತಮ್ಮ ಪ್ರೀತಿಯ ಜನರನ್ನು ಶಾಶ್ವತವಾಗಿ ಕಳೆದುಕೊಂಡಿದ್ದಾರೆ. ಪ್ರತಿ ವರ್ಷ ಹೀಗೇ ಸಂಭವಿಸಿದರೂ, ಈ ಬಿಕ್ಕಟ್ಟಿನ ಸ್ವರೂಪ ಪ್ರತಿಯೊಬ್ಬರನ್ನೂ ಬೆಚ್ಚಿಬೀಳಿಸುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಅಸ್ಸಾಂಗೆ ತಕ್ಷಣದ ಪರಿಹಾರ ಹಾಗೂ ಸುದೀರ್ಘ ಚೇತರಿಕೆಯ ಅಗತ್ಯವಿದ್ದು, ಸಂತ್ರಸ್ತರಿಗೆ ಸಹಾಯ ಮಾಡಲು ಬಯಸುವವರಿಗಾಗಿ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿರುವ ಸಂಸ್ಥೆಗಳ ವಿವರಗಳನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ. ಕೊನೆಯಲ್ಲಿ #CircleOfHope ಹ್ಯಾಶ್‌ಟ್ಯಾಗ್ ಬಳಸುವ ಮೂಲಕ ಎಲ್ಲರೂ ಒಗ್ಗೂಡಿ ಸಹಾಯ ಹಸ್ತ ಚಾಚುವಂತೆ ಮನವಿ ಮಾಡಿದ್ದಾರೆ.
ಆಲಿಯಾ ಜೊತೆಗೆ, ನಟಿ ಭೂಮಿ ಪೆಡ್ನೇಕರ್ ಕೂಡ ಅಸ್ಸಾಂನಲ್ಲಿನ ಪ್ರವಾಹ ಬಿಕ್ಕಟ್ಟಿನ ಬಗ್ಗೆ ಜಾಗೃತಿ ಮೂಡಿಸಲು ತಮ್ಮ ವೇದಿಕೆಯನ್ನು ಬಳಸುತ್ತಿದ್ದಾರೆ. ಕಳೆದ ವರ್ಷ ಪಂಜಾಬ್‌ನಲ್ಲಿ ನಡೆದ ಒಟ್ಟು ಪರಿಹಾರ ಪ್ರಯತ್ನಗಳನ್ನು ನೆನಪಿಸಿಕೊಳ್ಳುವಾಗ ಪ್ರವಾಹ ಪೀಡಿತ ಅಸ್ಸಾಂನಲ್ಲಿ ಪರಿಹಾರ ಪ್ರಯತ್ನಗಳನ್ನು ಬೆಂಬಲಿಸುವಂತೆ ಅವರು ಜನರನ್ನು ಒತ್ತಾಯಿಸಿದರು. ಹಲವಾರು ಹಳ್ಳಿಗಳ ಸ್ಥಳಾಂತರ, ಹೆಚ್ಚುತ್ತಿರುವ ಸಾವಿನ ಸಂಖ್ಯೆ ಮತ್ತು ಇತರವುಗಳನ್ನು ಒಳಗೊಂಡಂತೆ ಪ್ರವಾಹ ಪೀಡಿತ ಅಸ್ಸಾಂ ಅನ್ನು ಹೈಲೈಟ್ ಮಾಡಲು ಅವರು ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ.

ಅಸ್ಸಾಂನಲ್ಲಿ ಜಲಪ್ರಳಯ: 25 ಜಿಲ್ಲೆ ಜಲಾವೃತ

ಅಸ್ಸಾಂನಲ್ಲಿ ಸುರಿಯುತ್ತಿರುವ ಅಭೂತಪೂರ್ವ ಭಾರೀ ಮಳೆಯಿಂದಾಗಿ ನದಿಗಳು ಮೈದುಂಬಿ ಹರಿಯುತ್ತಿದ್ದು, 25 ಜಿಲ್ಲೆಗಳ 1800ಕ್ಕೂ ಹೆಚ್ಚು ಹಳ್ಳಿಗಳು ಸಂಪೂರ್ಣವಾಗಿ ಮುಳುಗಡೆಯಾಗಿವೆ. ಕೆಲವು ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಬರೋಬ್ಬರಿ ಶೇ. 425ಕ್ಕೂ ಹೆಚ್ಚು ಮಳೆ ದಾಖಲಾಗಿದ್ದು, ಇತಿಹಾಸದಲ್ಲೇ ಎಂದೂ ಪ್ರವಾಹ ಕಾಣದ ಗ್ರಾಮಗಳೂ ಜಲಾವೃತಗೊಂಡಿವೆ.
ಈ ಭೀಕರ ಪ್ರವಾಹಕ್ಕೆ ಇದುವರೆಗೆ ಕನಿಷ್ಠ 41 ಜನರು ಪ್ರಾಣ ಕಳೆದುಕೊಂಡಿದ್ದು, 80 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. 9 ಲಕ್ಷಕ್ಕೂ ಅಧಿಕ ಜನರು ಮನೆ-ಮಠ ಹಾಗೂ ಪ್ರಮುಖ ದಾಖಲೆಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾವಿರಾರು ಹೆಕ್ಟೇರ್ ಕೃಷಿ ಭೂಮಿ ಜಲಾವೃತಗೊಂಡಿದ್ದು, ನೂರಾರು ಜಾನುವಾರುಗಳು ಕೊಚ್ಚಿಹೋಗಿವೆ. ಸದ್ಯ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net