ಪ್ರಿನ್ಸ್​ಗಾಗಿ ಬಾಲಿವುಡ್​ನ ಸುರಸುಂದರಿಯನ್ನು ಟಾಲಿವುಡ್​ಗೆ ಕರೆತರಲಿರುವ ಜಕ್ಕಣ್ಣ?

Published on
ಹೈದರಾಬಾದ್: ಮಾರ್ಚ್ 25ಕ್ಕೆ ಎಸ್.ಎಸ್.ರಾಜಮೌಳಿ ಅವರ ಪ್ಯಾನ್ ಇಂಡಿಯಾ ಸಿನಿಮಾ 'RRR' ರಿಲೀಸ್ ಆಗಲಿದೆ. 'RRR' ಸಿನಿಮಾ ನೋಡಲು ಪ್ರಪಂಚದಾದ್ಯಂತ ಸಿನಿಪ್ರೇಕ್ಷಕರು ಕಾಯುತ್ತಿದ್ದಾರೆ. ಆದರೆ, ಹಲವರಿಗೆ ಮಾತ್ರ ಅದರಲ್ಲಿಯೂ ಟಾಲಿವುಡ್​ನ ಪ್ರಿನ್ಸ್ ಮಹೇಶ್ ಬಾಬು ಅಭಿಮಾನಿಗಳಿಗೆ ಎಸ್.ಎಸ್.ರಾಜಮೌಳಿ ಅವರ ಮುಂಬರುವ ಸಿನಿಮಾದ ಬಗ್ಗೆಯೇ ಚಿಂತೆ ಎಂಬಂತೆ ಕಾಣುತ್ತಿದೆ. ಯಾಕೆ ಅಂತೀರಾ...? ಹಲವು ವರದಿಗಳ ಪ್ರಕಾರ ಎಸ್.ಎಸ್. ರಾಜಮೌಳಿ ಅವರ 'RRR' ಚಿತ್ರದ ರಿಲೀಸ್ ನಂತರ ಅವರ ಮುಂಬರುವ ಚಿತ್ರದಲ್ಲಿ ಪ್ರಿನ್ಸ್ ಮಹೇಶ್ ಬಾಬು ನಾಯಕ ನಟ. ಇನ್ನು, ಸದ್ಯ ಈ ಹೆಸರಿಲ್ಲದ, ಹೆಚ್ಚು ಮಾಹಿತಿ ಕೂಡಾ ಇಲ್ಲದ ಮಹೇಶ್ ಹಾಗೂ ರಾಜಮೌಳಿ ಅವರ ಸಿನಿಮಾದ ಬಗ್ಗೆ ಮತ್ತೊಂದು ಕುತೂಹಲಕಾರಿ ಮಾಹಿತಿ ಗಾಂಧಿ ನಗರದಲ್ಲಿ ಹರಿದಾಡುತ್ತಿದೆ. ಅದು, ಏನು ಅಂತೀರಾ...?
ಹೌದು, ಪ್ಯಾನ್ ಇಂಡಿಯಾ ಸಿನಿಮಾಗಳು ಎಂಬ ಕಾನ್ಸೆಪ್ಟ್ ಬಂದಮೇಲೆ, ಬಾಲಿವುಡ್‌ ನಟರು ಸೌತ್ ಚಿತ್ರದತ್ತ ಹೆಚ್ಚು ಹೆಚ್ಚು ಗಮನ ಕೊಡುತ್ತಿರುವ ವಿಷಯ ಎಲ್ಲರಿಗೂ ತಿಳಿದಿದೆ. ಹಾಗಾಗಿ, ತಮಿಳು-ತೆಲುಗು ಸಿನಿಮಾಗಳಲ್ಲಿ ಬಾಲಿವುಡ್ ಮಂದಿ ಯಾವುದೇ ಬ್ಯಾರಿಕೇಡ್ ಇಲ್ಲದೆ ಅಭಿನಯಿಸೋಕೆ ರೆಡಿಯಾಗಿದ್ದಾರೆ. ಸದ್ಯ, ಸೌತ್‌ನಲ್ಲಿ ಮಿಂಚಲು ರೆಡಿಯಾಗಿರುವ ಬಾಲಿವುಡ್ ಸ್ಟಾರ್ ನಟಿಯರು ಅಂದರೆ ಅದು ನಟಿ ಆಲಿಯಾ ಭಟ್ ಮತ್ತು ನಟಿ ದೀಪಿಕಾ ಪಡುಕೋಣೆ. ಈ ಇಬ್ಬರು ನಟಿಯರು ತೆಲುಗು ಚಿತ್ರಗಳಲ್ಲಿ ಈಗಾಗಲೇ ಅಭಿನಯಿಸುತ್ತಿದ್ದಾರೆ. ನಟಿ ಆಲಿಯಾ ಭಟ್  ಈಗಾಗಲೇ ರಾಜಮೌಳಿ ಅವರ 'RRR' ಚಿತ್ರದ ಮೂಲಕ ಸೌತ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರದಲ್ಲಿನ ಆಲಿಯಾ ಭಟ್ ಅವರ ಸೀತೆಯ ಲುಕ್ ಬಹುತೇಕ ಎಲ್ಲರಿಗೂ ಇಷ್ಟವಾಗಿದೆ. ಈಗ ನಟಿ ಆಲಿಯಾ ಭಟ್ ಅದ್ಯಾಕೊ ಸೌತ್‌ ಸಿನಿರಂಗದಲ್ಲಿ ಹೆಚ್ಚು ಹೆಚ್ಚು ಮಿಂಚುವ ಸಾಧ್ಯತೆಗಳು ಇವೆ ಎಂಬಂತೆ ಕಾಣುತ್ತಿದೆ.
ಹೌದು, ಯಾಕೆಂದರೆ ಸಾಲು ಸಾಲು ತೆಲುಗು ಸಿನಿಮಾಗಳಿಗೆ ನಟಿ ಆಲಿಯಾ ಅವರ ಹೆಸರು ಕೇಳಿ ಬರ್ತಿದೆ. ಇದೀಗ, ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಜೊತೆಗೆ ನಟಿ ಆಲಿಯಾ ಭಟ್ ಮುಂದಿನ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಎಸ್.ಎಸ್.ರಾಜಮೌಳಿ ನಿರ್ದೇಶನ ಇರುವ ಹಾಗೂ ನಟ ಮಹೇಶ್ ಬಾಬು ನಟಿಸಲಿರುವ ಹೆಸರಿಲ್ಲದ ಮುಂಬರುವ ಚಿತ್ರಕ್ಕೆ ನಟಿ ಆಲಿಯಾ ಭಟ್ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ. ಇನ್ನು, ನಟಿ ಆಲಿಯಾ ಭಟ್ ಅವರು ಜೂನಿಯರ್ ಎನ್‌ಟಿಆರ್ ಅವರ ಮುಂಬರುವ #NTR30 ಚಿತ್ರದಲ್ಲಿ ಕೂಡಾ ನಾಯಕಿಯಾಗಿ ಮಿಂಚಲಿದ್ದಾರೆ ಎನ್ನಲಾಗಿದೆ. ಹಾಗಾಗಿ, ಆಲಿಯಾ ಭಟ್ ಅವರು ಮಹೇಶ್ ಬಾಬು ಮತ್ತು ಜೂನಿಯರ್ ಎನ್‌ಟಿಆರ್ ಜೊತೆಗೆ ಅಭಿನಯಿಸಿದರೆ, ಒಟ್ಟು 3 ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿದಂತಾಗುತ್ತದೆ. ಇನ್ನು, ಆಲಿಯಾ ಭಟ್, ದೀಪಿಕಾ ಪಡುಕೋಣೆ ನಂತರ ಟಾಲಿವುಡ್ ಮತ್ತು ದಕ್ಷಿಣ ಭಾರತದ ಸಿನಿರಂಗಗಳಿಗೆ ಕಾಲಿಡಲು ಹಲವು ಬಾಲಿವುಡ್ ಮಂದಿ ಕಾದು ಕುಳಿತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net