

ಬೆಂಗಳೂರು: ನಿರ್ಮಾಪಕ, ನಿರ್ದೇಶಕ ವಿಷ್ಣುಕಾಂತ್ ಪುತ್ರ ಭರತ್ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ಚಿತ್ರ ‘ರೇಸರ್’. ಬೈಕ್ ರೇಸ್ ಕುರಿತ ನೈಜ ಘಟನೆಯಾಧಾರಿತ ಈ ಚಿತ್ರಕ್ಕೆ ಸಂದೇಶ್ ಪ್ರಸನ್ನ ನಾಯಕನಾಗಿದ್ದು, ಅವರಿಗೆ ಅಕ್ಷಿತಾ ಸತ್ಯನಾರಾಯಣ್ ನಾಯಕಿಯಾಗಿದ್ದಾರೆ.
ಇತ್ತೀಚೆಗಷ್ಟೆ ನಾಯಕಿ ಅಕ್ಷಿತಾರನ್ನು ಪರಿಚಯಿಸುವ ಮೋಷನ್ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಮೂಲತಃ ಮಾಡೆಲಿಂಗ್ ಮಾಡಿಕೊಂಡಿದ್ದ ಕನ್ನಡದ ಹುಡುಗಿ ಅಕ್ಷಿತಾ ಈ ಹಿಂದೆ ತೆಲುಗು ಧಾರಾವಾಹಿಯಲ್ಲಿ ನಟಿಸಿದ್ದರು. ಇದೀಗ ‘ರೇಸರ್’ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಡೆಬ್ಯೂ ಮಾಡುತ್ತಿದ್ದಾರೆ. ವಿಶೇಷ ಅಂದರೆ ಈ ಚಿತ್ರಕ್ಕಾಗಿ ಅಕ್ಷಿತಾ ಕೂಡ ಬೈಕ್ ರೇಸ್ ಕಲಿತಿದ್ದಾರೆ. ದುಬಾರಿ ಬೆಲೆಯ ಬೈಕ್ ಏರಿ ಅವರು ಎಂಟ್ರಿ ಕೊಡುವ ಮೋಷನ್ ಪೋಸ್ಟರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಕಳೆದ ಜನವರಿಯಲ್ಲಿ ಸೆಟ್ಟೇರಿದ್ದ ‘ರೇಸರ್’ ಚಿತ್ರದ ಶೇಕಡಾ 35ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಇದೇ ತಿಂಗಳಂತ್ಯ ಹಾಡುಗಳ ಶೂಟಿಂಗ್ ನಡೆಸುವ ಆಲೋಚನೆ ಚಿತ್ರತಂಡದ್ದು. ‘ಭಾಯ್’ ಎಂಬ ಮುಖ್ಯ ಪಾತ್ರಕ್ಕೆ ಮಲಯಾಳಂ ಹಾಗೂ ಕನ್ನಡದ ಇಬ್ಬರು ಸ್ಟಾರ್ ನಟರನ್ನು ಸಂಪರ್ಕಿಸಲಾಗಿದ್ದು, ಇನ್ನಷ್ಟೇ ಆಯ್ಕೆಯಾಗಬೇಕಿದೆ. ಸಂದೇಶ್ ಪ್ರಸನ್ನ, ಅಕ್ಷಿತಾ ಜತೆ ಯಶ್ ಶೆಟ್ಟಿ, ಕಾಕ್ರೋಚ್ ಸುಧಿ, ಬಾಲರಾಜವಾಡಿ, ಸೂರಜ್, ಸ್ವಾತಿ ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ಮೈಸೂರು ಸ್ವಾಮಿ ಛಾಯಾಗ್ರಹಣವಿರಲಿದೆ.