ತಂದೆ-ತಾಯಿಗೆ ಪ್ರಶಸ್ತಿಯೇ ಗಿಫ್ಟ್​ ... ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರದ ಹಾಡುಗಳ ಬಿಡುಗಡೆ

Akshi - Final
Published on

ಬೆಂಗಳೂರು: ‘ಅಕ್ಷಿ’ ಎಂಬ ಹೆಸರಿನ ಚಿತ್ರವೊಂದು ಸದ್ದಿಲ್ಲದೆ ನಿರ್ಮಾಣವಾಗಿದೆ ಎಂಬ ವಿಷಯ ಹಲವರಿಗೆ ಗೊತ್ತಾಗಿದ್ದೇ, ಆ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಬಂದ ನಂತರ. ಅಲ್ಲಿಯವರೆಗೂ ಹೆಚ್ಚು ಸದ್ದಾಗದ ಮತ್ತು ಸುದ್ದಿಯಾಗದ ಚಿತ್ರ, ಆ ನಂತರ ಎಲ್ಲರಿಗೂ ಪರಿಚಯವಾಯಿತು. ಈಗ ಆ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಅದಕ್ಕೂ ಮುನ್ನ ಈ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ.

ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಮನೋಜ್ ಕುಮಾರ್, ‘ಎಲ್ಲರ ಹಾರೈಕೆಯಿಂದ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಬಂದಿದೆ. ನನ್ನದು ಚಿಕ್ಕಹಳ್ಳಿ .ಅಲ್ಲಿ ಪೇಪರ್ ಸಹ ಸಿಗುವುದಿಲ್ಲ. ಚಿತ್ರಕ್ಕೆ ಪ್ರಶಸ್ತಿ ಬಂದಾಗ, ಎಲ್ಲ ಪತ್ರಿಕೆಗಳಲ್ಲಿ ಫೋಟೋ ಬಂದಿತ್ತು. ಅದನ್ನು ನೋಡಲು ನನ್ನ ಅಪ್ಪ ಏಳು ಕಿಲೋಮೀಟರ್ ದೂರದಿಂದ ಪತ್ರಿಕೆ ಕೊಂಡು, ನೋಡಿ ಸಂತೋಷ ಪಟ್ಟಿದ್ದರು. ನಾನು ಇಲ್ಲಿಯವರೆಗೂ ನನ್ನ ತಾಯಿಗೆ ಒಂದು ಸೀರೆ ಕೂಡ ಕೊಡಿಸಿಲ್ಲ. ಈ ಸಂತಸವೇ ನನ್ನ ಹೆತ್ತವರಿಗೆ ನನ್ನ ಗಿಫ್ಟ್​’ ಎಂದು ಭಾವುಕರಾಗುತ್ತಾರೆ.

ಇನ್ನು ‘ಸ್ಪರ್ಶ’ ರೇಖಾ, ವಿಜಯಸೂರ್ಯ, ಮಿಂಟೋ ಹಾಸ್ಪಿಟಲ್ ನಿರ್ದೇಶಕರಾದ ಡಾ.ಸುಜಾತ ರಾಥೋಡ್ ‘ಅಕ್ಷಿ’ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಚಿತ್ರದ ಹೈಲೈಟ್ ಎಂದರೆ, ದಿವಂಗತ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಡಿರುವ ಒಂದು ಹಾಡು. ಕಣ್ಣಿಲ್ಲದವರಿಗೆ ಬಣ್ಣಗಳ ತಿಳಿಸಿ ಹೇಳುವ ಈ ಹಾಡಿನ ಸಾಹಿತ್ಯ ಕೇಳಿ, ‘ನಾನು ಎಷ್ಟೋ ಹಾಡುಗಳನ್ನು ಹಾಡಿದ್ದೇನೆ. ಆದರೆ ಈ ರೀತಿಯ ಹಾಡು ಹಾಡಿದ್ದು ತುಂಬ ಖುಷಿಯಾಗಿದೆ’ ಎಂದು ಹೇಳಿದ್ದರಂತೆ ಎಸ್‌ಪಿಬಿ.

‘ಅಕ್ಷಿ’ ಚಿತ್ರದಲ್ಲಿ ಗೋವಿಂದೇಗೌಡ, ಬೇಬಿ ಸೌಮ್ಯ ಪ್ರಭು, ಮಾಸ್ಟರ್ ಮಿಥುನ್, ಇಳಾ ವಿಟ್ಲ ನಟಿಸಿದ್ದಾರೆ. ಕಲಾದೇಗುಲ ಶ್ರೀನಿವಾಸ್ ಈ ಚಿತ್ರವನ್ನು ನಿರ್ಮಿಸುವುದರ ಜತೆಗೆ ಸಂಗೀತ ಸಂಯೋಜನೆಯನ್ನೂ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net