ಕನ್ನಡ ಸಿನಿಮಾದಲ್ಲಿ ರಶ್ಮಿಕಾ ನಟಿಸದಿರಲು ಕಾರಣ...

Rashmika
Published on

‘ಪೊಗರು’ ಚಿತ್ರವೇ ಕೊನೆ. ಆ ನಂತರ ತೆಲುಗು, ತಮಿಳು, ಹಿಂದಿ ಅಂತ ಬಿಜಿಯಾಗಿಬಿಟ್ಟಿದ್ದಾರೆ ರಶ್ಮಿಕಾ ಮಂದಣ್ಣ. ಹಿಂದಿಯಲ್ಲಿ ಎರಡು, ತಮಿಳಿನಲ್ಲಿ ಒಂದು, ತೆಲುಗಿನಲ್ಲಿ ಎರಡು ... ಹೀಗೆ ರಶ್ಮಿಕಾ ಸತತವಾಗಿ ಚಿತ್ರೀಕರಣ ಮಾಡುತ್ತಲೇ ಇದ್ದಾರೆ. ಈ ಮಧ್ಯೆ, ಅವರು ಕನ್ನಡ ಚಿತ್ರರಂಗವನ್ನು ಮರೆತೇ ಬಿಟ್ಟಿದ್ದಾರೆ ಎಂಬ ಅಭಿಪ್ರಾಯವೂ ಇದೆ. ಹಾಗೇನಿಲ್ಲಂತೆ. ಸದ್ಯ ತುಂಬಾ ಬಿಜಿ ಇರುವುದರಿಂದ, ಕನ್ನಡದಲ್ಲಿ ನಟಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ರಶ್ಮಿಕಾ ಹೇಳಿಕೊಂಡಿದ್ದಾರೆ.

ನೀವ್ಯಾಕೆ ಕನ್ನಡ ಚಿತ್ರಗಳಲ್ಲಿ ನಟಿಸುತ್ತಿಲ್ಲ ಎಂದು ಇತ್ತೀಚೆಗೆ ರಶ್ಮಿಕಾ ಅವರನ್ನು ಸಂದರ್ಶನವೊಂದರಲ್ಲಿ ಕೇಳಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿರುವ ಅವರು, ‘ಈಗಾಗಲೇ ತೆಲುಗು, ಹಿಂದಿ ಮತ್ತು ತಮಿಳು ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಹೈದರಾಬಾದ್​ನಿಂದ ಮುಂಬೈಗೆ ಹೋಗಿ, ಬಂದು ಮಾಡುತ್ತಿದ್ದೇನೆ. ಕನ್ನಡ ಚಿತ್ರವನ್ನೂ ಒಪ್ಪಿಕೊಂಡು ಬಿಟ್ಟರೆ, ವರ್ಷಕ್ಕೆ 565 ದಿನಗಳು ಬೇಕಾಗುತ್ತದೆ. ಉಸಿರಾಡುವುದಕ್ಕೆ ಕಷ್ಟವಾಗುತ್ತದೆ. ಹಾಗಾಗಿ, ಕನ್ನಡದ ಯಾವುದೇ ಹೊಸ ಚಿತ್ರವನ್ನೂ ಒಪ್ಪಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದ್ದಾರೆ. ಅಂದಹಾಗೆ, ‘ಮಿಷನ್ ಮಜ್ನು’ ಎಂಬ ಬಾಲಿವುಡ್ ಚಿತ್ರ ಮುಗಿಸಿರುವ ರಶ್ಮಿಕಾ, ಅಮಿತಾಭ್ ಬಚ್ಚನ್ ಜತೆಗೆ ‘ಗುಡ್​ಬೈ’ ಎಂಬ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಇನ್ನು, ತೆಲುಗಿನಲ್ಲಿ ‘ಪುಷ್ಪಾ’ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಇದಲ್ಲದೆ ‘ಆಡವಾಳ್ಳು ಮೀಕು ಜೋಹಾರ್​ಲು’ ಎಂಬ ಚಿತ್ರದಲ್ಲೂ ನಟಿಸುತ್ತಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net