

ಬೆಂಗಳೂರು: ‘ಅಪ್ಪು ಅವರಿಗೆ ಚಿತ್ರದ ಲಿಂಕ್ ಕಳುಹಿಸಲಾಗಿತ್ತು. ಅವರು ಚಿತ್ರವನ್ನು ನೋಡಿದ್ದಾರೋ, ಇಲ್ಲವೋ ಗೊತ್ತಿಲ್ಲ. ನಮ್ಮೆಲ್ಲರ ಮನಸ್ಸು ಹೇಳುತ್ತಿದೆ ಅವರು ಚಿತ್ರ ನೋಡಿದ್ದಾರೆಂದು. ಒಂದು ವೇಳೆ ನೋಡಿಲ್ಲ ಎಂದಾದರೆ, ಅವರ ಕಣ್ಣುಗಳಾದರೂ ಈ ಸಿನಿಮಾ ನೋಡಲಿ’- ಹೀಗೊಂದು ನಂಬಿಕೆ ಮತ್ತು ಆಶಯವನ್ನು ಹೊರಹಾಕಿತು ‘ಅಕ್ಷಿ’ ಚಿತ್ರತಂಡ.
ಹೀಗೆ ಹೇಳುವುದಕ್ಕೆ ಕಾರಣ, ಡಿ. 3ರಂದು ‘ಅಕ್ಷಿ’ ಸಿನಿಮಾ ತೆರೆಗೆ ಬರುತ್ತಿದೆ. ಈ ಸಂಭ್ರಮ ಮತ್ತು ಭಾವುಕ ಗಳಿಗೆಯನ್ನು ತಂಡ ಹಂಚಿಕೊಂಡಿತು. ಮನೋಜ್ ಕುಮಾರ್ ಈ ಚಿತ್ರದ ನಿರ್ದೇಶಕರು. ಡಾ. ರಾಜ್ ನಿಧನ ಹೊಂದಿದ ಸಂದರ್ಭದಲ್ಲಿ, ‘ರಾಜ್ಕುಮಾರ್ ಕಣ್ಣು ದಾನ ಮಾಡಿದ್ರಂತೆ ...’ ಎಂದು ಅವರೂರಿನ ಜನ ಆಡಿದ ಮಾತು ಕೇಳಿ, ಈ ಕಥೆ ಹುಟ್ಟಿಕೊಂಡಿತಂತೆ. ಆ ಕಥೆಯೇ ಇದೀಗ ‘ಅಕ್ಷಿ’ಯಾಗಿದೆ. ರಾಷ್ಟ್ರ ಪ್ರಶಸ್ತಿಯನ್ನೂ ಪಡೆದುಕೊಂಡಿದೆ. ಕಲಾದೇಗುಲ ಫಿಲಂಸ್ ಬ್ಯಾನರ್ನಲ್ಲಿ ಚಿತ್ರ ನಿರ್ವಣವಾಗಿದೆ. ಶಾಲಿನಿ ಆರ್ಟ್ಸ್ ಚಿತ್ರದ ವಿತರಣೆ ಹಕ್ಕನ್ನು ಪಡೆದಿದೆ.