

ಮುಂಬೈ: ಲಾಕ್ಡೌನ್ ನಂತರ ಸತತವಾಗಿ ಚಿತ್ರಗಳಲ್ಲಿ ನಟಿಸುತ್ತಿರುವ ಒಬ್ಬ ನಟ ಎಂದರೆ ಅದು ಅಕ್ಷಯ್ ಕುಮಾರ್ ಎಂದರೆ ತಪ್ಪಿಲ್ಲ. ಸ್ಕಾಟ್ಲ್ಯಾಂಡ್ನಲ್ಲಿ 'ಬೆಲ್ಬಾಟಮ್' ಚಿತ್ರದ ಚಿತ್ರೀಕರಣ ಮುಗಿಸಿ ಬಂದ ಅಕ್ಷಯ್, ಆ ನಂತರ 'ಅತರಂಗಿ ರೇ' ಚಿತ್ರದಲ್ಲಿನ ತಮ್ಮ ಭಾಗದ ಚಿತ್ರೀಕರಣ ಮುಗಿಸಿದ್ದಾರೆ. ಜತೆಗೆ, 'ಪೃಥ್ವಿರಾಜ್' ಚಿತ್ರದ ಒಂದು ಹಂತದ ಚಿತ್ರೀಕರಣದಲ್ಲೂ ಪಾಲ್ಗೊಂಡಿದ್ದಾರೆ.
ಹೀಗೆ ಲಾಕ್ಡೌನ್ ನಂತರ ಮೂರು ಚಿತ್ರಗಳಿಗೆ ಬಣ್ಣ ಹಚ್ಚಿದ ಅಕ್ಷಯ್, ಇದೀಗ ನಾಲ್ಕನೇ ಚಿತ್ರಕ್ಕೂ ಬಣ್ಣ ಹಚ್ಚಿದ್ದಾರೆ. ಅದೇ 'ಬಚ್ಚನ್ ಪಾಂಡೆ'. ಈ ಚಿತ್ರದ ಚಿತ್ರೀಕರಣ ಕಳೆದ ವರ್ಷವೇ ಪ್ರಾರಂಭವಾಗಬೇಕಿತ್ತು. ಆದರೆ, ಲಾಕ್ಡೌನ್ನಿಂದಾಗಿ ಚಿತ್ರತಂಡದ ಪ್ಲಾನ್ಗಳೆಲ್ಲಾ ತಲೆಕೆಳಗಾಗಿವೆ.
ಇದೀಗ, 'ಬಚ್ಚನ್ ಪಾಂಡೆ' ಚಿತ್ರದ ಚಿತ್ರೀಕರಣವು ರಾಜಸ್ತಾನದಲ್ಲಿ ಪ್ರಾರಂಭವಾಗಿದ್ದು, ಅಕ್ಷಯ್ ಕುಮಾರ್ ಭಾಗವಹಿಸಿದ್ದಾರೆ. ಜತೆಗೆ ಕೃತಿ ಸನಾನ್, ಅರ್ಶದ್ ವಾರ್ಸಿ ಸೇರಿದಂತೆ ಹಲವು ನಟ-ನಟಿಯರು ಈ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ವಿಶೇಷವೆಂದರೆ, ಸಾಜಿದ್ ನಾಡಿಯಾಡ್ವಾಲಾ ನಿರ್ಮಾಣದ 10ನೇ ಚಿತ್ರದಲ್ಲಿ ಅಕ್ಷಯ್ ನಟಿಸುತ್ತಿದ್ದಾರೆ.
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಅಕ್ಷಯ್, 'ಹೊಸ ವರ್ಷ, ಹಳೆಯ ಸ್ನೇಹ. 'ಬಚ್ಚನ್ ಪಾಂಡೆ' ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದೇನೆ. ಸಾಜಿದ್ ಬ್ಯಾನರ್ನಲ್ಲಿ ನಾನು ನಟಿಸುತ್ತಿರುವ 10ನೇ ಚಿತ್ರ ಇದು. ಭವಿಷ್ಯದಲ್ಲಿ ಇನ್ನಷ್ಟು ಚಿತ್ರಗಳಲ್ಲಿ ನಟಿಸುವ ನಂಬಿಕೆ ಇದೆ' ಎಂದು ಹೇಳಿಕೊಂಡಿದ್ದಾರೆ.
'ಬಚ್ಚನ್ ಪಾಂಡೆ' ಚಿತ್ರದಲ್ಲಿ ಅಕ್ಷಯ್ ಕುಮಾರ್ ವಿಭಿನ್ನ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದು, ಫರ್ಹಾದ್ ಸಾಮ್ಜಿ ನಿರ್ದೇಶನ ಮಾಡುತ್ತಿದ್ದಾರೆ.