ವಿಮರ್ಶಕರಿಗೆ ನನ್ನ ಸಿನಿಮಾಗಳು ಇಷ್ಟವಾಗುವುದಿಲ್ಲ: ಅಕ್ಷಯ್​ ಕುಮಾರ್​

Akshay Kumar - Laxmi - Final
Published on

ಮುಂಬೈ: ಅಕ್ಷಯ್​ ಕುಮಾರ್​ ಅಭಿನಯದ 'ಲಕ್ಷ್ಮೀ' ಚಿತ್ರವು ನವೆಂಬರ್​ ಒಂಬತ್ತರಂದು ಡಿಸ್ನಿ ಹಾಟ್​ಸ್ಟಾರ್​ನಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದ ಬಗ್ಗೆ ವಿಮರ್ಶಕರ ಮತ್ತು ಜನರ ಅಭಿಪ್ರಾಯಗಳು ಅಷ್ಟೇನೂ ಚೆನ್ನಾಗಿಲ್ಲ. ಹಲವರು ಈ ಚಿತ್ರಕ್ಕೆ ಕೇವಲ ಒಂದು ಸ್ಟಾರ್​ ನೀಡಿದ್ದು, ಅಕ್ಷಯ್​ ಕುಮಾರ್​ ಇಲ್ಲಿದಿದ್ದರೆ ಇದೊಂದು ಸಾಧಾರಣ ಚಿತ್ರ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ, ಡಿಸ್ನಿ ಹಾಟ್​ಸ್ಟಾರ್​ ಸಂಸ್ಥೆಯು ತನ್ನ ಸೋಷಿಯಲ್​ ಮೀಡಿಯಾ ಅಕೌಂಟ್​ಗಳಲ್ಲಿ, ಓಟಿಟಿಯಲ್ಲಿ ಅತೀ ಹೆಚ್ಚು ವೀಕ್ಷಣೆಗೊಳಗಾದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಹಿಂದಿನ ಎಲ್ಲಾ ದಾಖಲೆಗಳನ್ನು ಸಹ 'ಲಕ್ಷ್ಮೀ' ಚಿತ್ರವು ಮುರಿದಿದೆ ಎಂದು ಘೋಷಿಸಿದೆ. ಅಷ್ಟೇ ಅಲ್ಲ, ಅಕ್ಷಯ್​ ಕುಮಾರ್​ ಅವರ ಚಿತ್ರಗಳಲ್ಲೇ ಮೊದಲ ದಿನ ಅತೀ ಹೆಚ್ಚು ಕಲೆಕ್ಷನ್​ ಆದ ಚಿತ್ರ ಎಂದು ಘೋಷಿಸಿದ್ದು, ಈ ಕುರಿತು ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ.

ಅಕ್ಷಯ್​ ಕುಮಾರ್​ ಅವರ ಚಿತ್ರಗಳಲ್ಲೇ ಅತೀ ಹೆಚ್ಚು ಕಲೆಕ್ಷನ್​ ಆದ ಚಿತ್ರ ಎಂದರೆ ಯಾವ ದೃಷ್ಟಿಯಲ್ಲಿ ಹೇಳಲಾಗಿದೆ? ಇದಕ್ಕೆ ಪೂರಕವಾದ ಅಂಕಿ-ಅಂಶಗಳು ಎಲ್ಲಿ? ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಚಿತ್ರ ಜನರಿಗೆ ಇಷ್ಟವಾಗಿಲ್ಲ ಎಂಬ ಅಂಶವನ್ನು ಮರೆಮಾಚುವುದಕ್ಕೆ ಈ ತರಹದ ತಂತ್ರಗಳನ್ನು ಮಾಡಲಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಯಾರು ಏನೇ ಹೇಳಿದರೂ, ಅಕ್ಷಯ್​ ಕುಮಾರ್​ ಮಾತ್ರ ಚಿತ್ರದ ಬಗ್ಗೆ ಸಂತೋಷದಿಂದ ಮಾತನಾಡಿದ್ದಾರೆ. ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ಬಹಳ ಸಂತೋಷವಾಗುತ್ತಿದೆ. ಬಹಳಷ್ಟು ವಿಮರ್ಶಕರಿಗೆ ನನ್ನ ಚಿತ್ರ ಇಷ್ಟವಾಗುವುದಿಲ್ಲ ಎಂದು ನನಗೆ ಗೊತ್ತಿಲ್ಲ. ನನ್ನ ಚಿತ್ರಗಳು ವಿಮರ್ಶಕರಿಗೆ ಇಷ್ಟ ಆಗಬೇಕು ಎನ್ನುವುದಕ್ಕಿಂತ ಪ್ರೇಕ್ಷಕರಿಗೆ ಇಷ್ಟವಾಗುಬೇಕು ಎಂಬುದು ನನ್ನ ಆಸೆ. ಇದೊಂದು ವಿಭಿನ್ನವಾದ ಚಿತ್ರ. ತೃತೀಯಲಿಂಗಿಗಳ ಹೋರಾಟದ ಕುರಿತಾದ ಚಿತ್ರ. ಅವರ ಹಕ್ಕುಗಳಿಗಾಗಿ ಹೋರಾಡುವ ಚಿತ್ರ. 'ಪ್ಯಾಡ್​ಮ್ಯಾನ್​' ಇರಲಿ, 'ಟಾಯ್ಲೆಟ್​ - ಏಕ್​ ಪ್ರೇಮ್​ ಕಥಾ' ಇರಲಿ ಅಥವಾ 'ಮಿಷನ್​ ಮಂಗಲ್​' ಆಗಲೀ ... ನನ್ನ ಚಿತ್ರಗಳು ಒಂದಕ್ಕಿಂತ ವಿಭಿನ್ನವಾಗಿರಬೇಕು ಎನ್ನುವುದು ನನ್ನ ಆಸೆ' ಎಂದು ಅಕ್ಷಯ್​ ಕುಮಾರ್​ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net