

ಮುಂಬೈ: ಅಕ್ಷಯ್ ಕುಮಾರ್ ಅಭಿನಯದ ಇನ್ನೊಂದು ಚಿತ್ರ ಬಿಡುಗಡೆಯಾಗುವುದಕ್ಕೆ ತಯಾರಿದೆ. ಅದೇ 'ಸೆಲ್ಫಿ'. ಮಲಯಾಳಂನ 'ಡ್ರೈವಿಂಗ್ ಲೈಸನ್ಸ್' ಚಿತ್ರದ ರೀಮೇಕ್ ಆದ 'ಸೆಲ್ಫಿ'ಯಲ್ಲಿ ಅವರ ಜತೆಗೆ ಇಮ್ರಾನ್ ಹಶ್ಮಿ ಸಹ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಕ್ಷಯ್ ಕುಮಾರ್ ಸಿಕ್ಕಾಪಟ್ಟೆ ಹೊಗಳಿದ್ದಾರೆ.
ಅಕ್ಷಯ್ ಕುಮಾರ್, ಮೊದಲಿನಿಂದಲೂ ಪ್ರಧಾನಿ ನರೇಂದ್ರ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡವರು. ಅವಕಾಶ ಸಿಕ್ಕಾಗಲೆಲ್ಲ ಅವರ ಬಗ್ಗೆ ಒಳ್ಳೆಯ ಮಾತುಗಳನ್ನೇ ಆಡಿದ್ದಾರೆ. ಈ ಬಾರಿ ಪ್ರಧಾನಿ ಅವರನ್ನು ಅಕ್ಷಯ್ ಹೊಗಳಿದ್ದೇಕೆ ಎಂಬ ಪ್ರಶ್ನೆ ಬಂದರೆ, ಅದಕ್ಕೆ ಉತ್ತರ ಇಲ್ಲಿದೆ.
ಕಳೆದ ವಾರ ನವದೆಹಲಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪ್ರಧಾನಿ ಮೋದಿ, ಚಿತ್ರ ಮತ್ತು ಚಿತ್ರರಂಗದವರ ಬಗ್ಗೆ ಅನಗತ್ಯ ಟೀಕೆಗಳನ್ನು ಮಾಡಬಾರದು ಪಕ್ಷದ ನಾಯಕರಿಗೆ ತಾಕೀತು ಮಾಡಿದ್ದರು. ಇದು ಸ್ವಾಗತಾರ್ಹವಷ್ಟೇ ಅಲ್ಲ, ಅವರಿಂದ ಪರಿಸಥಿತಿ ಬದಲಾದರೆ ಬಹಳ ಸಂತೋಷ ಎಂದು ಅಕ್ಷಯ್ ಹೇಳಿದ್ದಾರೆ.
'ನಮ್ಮ ಪ್ರಧಾನಿ ಬಹಳ ಒಳ್ಳೆಯ ಮಾತುಗಳನ್ನು ಹೇಳಿದ್ದಾರೆ. ಅವರು ಈ ದೇಶದ ಅತೀ ದೊಡ್ಡ ಇನ್ಫ್ಲುಯೆನ್ಸರ್. ಅವರೊಂದು ಮಾತು ಹೇಳಿ, ಒಂದಿಷ್ಟು ಬದಲಾವಣೆಗಳಾದರೆ, ಅದಕ್ಕಿಂತ ಸಂತೋಷದ ವಿಷಯ ಇನ್ನೊಂದಿಲ್ಲ. ಪರಿಸ್ಥಿತಿ ಬದಲಾಗಬೇಕಿದೆ. ಏಕೆಂದರೆ, ನಾವು ಸಾಕಷ್ಟು ಕಷ್ಟಪಟ್ಟು ಕೆಲಸ ಮಾಡಿರುತ್ತೇವೆ. ಒಂದು ಚಿತ್ರ ಮಾಡುತ್ತೇವೆ. ಸೆನ್ಸಾರ್ ಮಂಡಳಿಯಿಂದ ಅನುಮತಿ ಪತ್ರ ಪಡೆದ ಮೇಲೂ, ಕೆಲವರು ಅನಾವಶ್ಯಕ ಸಮಸ್ಯೆಗಳನ್ನು ಸೃಷ್ಟಿ ಮಾಡಿದರೆ, ಇದರಿಂದ ಹಲವು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮೋದಿ ಅವರು ಹೀಗೆ ಹೇಳಿರುವುದರಿಂದ, ನಮಗೆ ಒಂದಿಷ್ಟು ಅನುಕೂಲವಾಗಬಹುದು ' ಎಂದು ಅಕ್ಷಯ್ ಹೇಳಿದ್ದಾರೆ.
'ಸೆಲ್ಫಿ' ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಇಮ್ರಾನ್ ಹಶ್ಮಿ ಜತೆಗೆ ನುಸ್ರತ್ ಬರೂಚ, ಡಯಾನ ಪಡೆಂಟಿ ಮುಂತಾದವರು ನಟಿಸಿದ್ದಾರೆ. ರಾಜ್ ಮೆಹ್ತಾ ನಿರ್ದೇಶಿಸಿರುವ ಈ ಚಿತ್ರವು ಫೆಬ್ರವರಿ 24ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.