

ಬೆಂಗಳೂರು: ಒಂದು ಕಾಲಕ್ಕೆ ಆಕಾಶವಾಣಿಯೊಂದೇ ಜನರಿಗಿದ್ದ ಏಕೈಕ ಮನರಂಜನೆ. ಈಗ ಹೊಸಹೊಸ ಮಾಧ್ಯಮಗಳು ಬರುತ್ತಿದ್ದಂತೆಯೇ, ರೇಡಿಯೋ ಕೇಳುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಿರುವಾಗಲೇ 'ಆಕಾಶವಾಣಿ ಮೈಸೂರು ಕೇಂದ್ರ'ದಿಂದ ಹೊಸದೊಂದು ಹಾಡು ಬಿಡುಗಡೆಯಾಗಿದೆ.
'ಆಕಾಶವಾಣಿ ಮೈಸೂರು ಕೇಂದ್ರ' ಎನ್ನುವುದು ಸ್ಯಾಂಡಲ್ವುಡ್ನಲ್ಲಿ ತಯಾರಾಗಿರುವ ಹೊಸ ಚಿತ್ರ. ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ನಿರ್ಮಾಣವಾಗಿರುವ ಈ ಪ್ಯಾನ್ ಇಂಡಿಯಾ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ. ಅದಕ್ಕೂ ಮುನ್ನ ಚಿತ್ರದ ಹಾಡೊಂದು ಇತ್ತೀಚೆಗೆ ಬಿಡುಗಡೆಯಾಗಿ, ಸಾಕಷ್ಟು ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.
'ಜಬರ್ದಸ್ತ್ ಶೋ' ಖ್ಯಾತಿಯ ಸತೀಶ್ ಬತ್ತುಲ ನಿರ್ದೇಶಿಸಿರುವ "ಆಕಾಶವಾಣಿ ಮೈಸೂರು ಕೇಂದ್ರ' ಚಿತ್ರವನ್ನು ಎಂ.ಎಂ.ಅರ್ಜುನ್ ನಿರ್ಮಿಸಿದ್ದಾರೆ. ಕಾರ್ತಿಕ್ ಕೊಡಕಂಡ್ಲ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.
'ಆಕಾಶವಾಣಿ ಮೈಸೂರು ಕೇಂದ್ರ' ಚಿತ್ರವು ಪ್ರೇಮಕಥೆಯಾಗಿದ್ದು, ಇದರಲ್ಲಿ ಸಾಕಷ್ಟು ಥ್ರಿಲಿಂಗ್ ಅಂಶಗಳೂ ಇವೆಯಂತೆ. 'ಈಗ ಚಿತ್ರದ ಮೊದಲ ಹಾಡು ಬಿಡುಗಡೆ ಮಾಡಿದ್ದೇವೆ. ಸದ್ಯದಲ್ಲೇ ಬಿಡುಗಡೆ ದಿನಾಂಕ ತಿಳಿಸುತ್ತೇವೆ. ನಮ್ಮ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ' ಎನ್ನುತ್ತಾರೆ ನಿರ್ದೇಶಕ ಸತೀಶ್ ಬತ್ತುಲ. ಈ ಚಿತ್ರದಲ್ಲಿ ಶಿವಕುಮಾರ್, ಹುಮಯ್ ಚಂದ್, ಅಕ್ಷತ ಶ್ರೀಧರ್ ಹಾಗೂ ಅರ್ಚನ ಈ ಚಿತ್ರಡ ನಾಯಕ ಹಾಗೂ ನಾಯಕಿಯರಾಗಿ ನಟಿಸಿದ್ದಾರೆ.