'ಆಕಾಶವಾಣಿ ಬೆಂಗಳೂರು ನಿಲಯ' ಮುಂದಿನ ವರ್ಷ ಬಿಡುಗಡೆ

Akashavani Bangalore Nilaya - Final
Published on

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಲವು ವಿಭಿನ್ನ ರೀತಿಯ ಟೈಟಲ್​ಗಳಿರುವ ಚಿತ್ರಗಳು ಬಿಡುಗಡೆಯಾಗುತ್ತಿವೆ. ಈಗ ಆ ಸಾಲಿಗೆ 'ಆಕಾಶವಾಣಿ ಬೆಂಗಳೂರು ನಿಲಯ' ಸಹ ಒಂದು.

ಹೆಸರು ಕೇಳಿದರೆ, ಆಕಾಶವಾಣಿಯ ಬೆಂಗಳೂರು ನಿಲಯದಲ್ಲಿ ನಡೆಯುವಂತಹ ಕಥೆ ಚಿತ್ರದಲ್ಲಿದೆ ಎಂದನಿಸಬಹುದು.ಆದರೆ, ಇದೊಂದು ಹಾರರ್​, ಥ್ರಿಲ್ಲರ್​ ಚಿತ್ರವಂತೆ. ಆಕಾಶವಾಣಿಯ ಬೆಂಗಳೂರು ನಿಲಯಕ್ಕೂ, ಈ ಹಾರರ್​ ಅಂಶಗಳಿರುವ ಚಿತ್ರಕ್ಕೂ ಏನು ಸಂಬಂಧ ಎಂಬುದನ್ನು ತಿಳಿಯುವುದಕ್ಕೆ ಇನ್ನೊಂದಿಷ್ಟು ಸಮಯ ಕಾಯಬೇಕು.

ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡದವರು, ಇದೀಗ ಡಬ್ಬಿಂಗ್​ ಸಹ ಮುಗಿಸಿದ್ದಾರೆ. ಪೋಸ್ಟ್​ ಪ್ರೊಡಕ್ಷನ್​ ಹಂತದಲ್ಲಿರುವ ಚಿತ್ರವನ್ನು ಆದಷ್ಟು ಬೇಗ ಮುಗಿಸಿ, ಮುಂದಿನ ವರ್ಷ ಬಿಡುಗಡೆ ಮಾಡುವ ಯೋಚನೆ ಈ ಚಿತ್ರತಂಡಕ್ಕಿದೆ.

ಕಮಲಾನಂದ ಚಿತ್ರಾಲಯ ಸಂಸ್ಥೆಯಡಿ ಶಿವಾನಂದಪ್ಪ ಬಳ್ಳಾರಿ ಮತ್ತು ಸ್ನೇಹಿತರು ಸೇರಿ ನಿರ್ಮಿಸುತ್ತಿರುವ 'ಆಕಾಶವಾಣಿ ಬೆಂಗಳೂರು ನಿಲಯ' ಚಿತ್ರವನ್ನು ಎಂ. ಹರಿಕೃಷ್ಣ ನಿರ್ದೇಶಿಸಿದ್ದು, ಇದವರ ಎರಡನೆಯ ಚಿತ್ರವಾಗಿದೆ. ಈ ಚಿತ್ರಕ್ಕೆ 'ಸುಮ್‍ಸುಮ್ನೆ' ವಿಜಯಕುಮಾರ್ ಅವರು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ಬರೆದಿದ್ದು, ಎ.ಟಿ. ರವೀಶ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

ಚಿತ್ರದಲ್ಲಿ ನಿಖಿತಾ ಸ್ವಾಮಿ, ರಣ್ವೀರ್​ ಪಾಟೀಲ್, ಸುಚೇಂದ್ರ ಪ್ರಸಾದ್, ಟೆನ್ನಿಸ್ ಕೃಷ್ಣ, ಎಸ್.ನಾರಾಯಣಸ್ವಾಮಿ, ದಿವ್ಯಶ್ರೀ (ಕಾಮಿಡಿ ಕಿಲಾಡಿಗಳು) ಮುಂತಾದವರ ಈ ಚಿತ್ರದಲ್ಲಿ ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net