ಅಜೇಯ 30: ಆಗಿನಷ್ಟೇ ಈಗಲೂ ನಿರ್ಭಾವುಕ ದೇವಗನ್

Ajay
Published on

ಮನರಂಜನೆಗೆ ಗೋವಿಂದ, ಅನಿಲ್ ಕಪೂರ್ ಇದ್ದರು. ಆಕ್ಷನ್​ಗೆ ಸಂಜಯ್ ದತ್, ಸನ್ನಿ ಡಿಯೋಲ್, ಜಾಕಿ ಶ್ರಾಫ್​ರಂತಹ ಕಟ್ಟುಮಸ್ತಿನ ಆಳುಗಳಿದ್ದರು. ಲವ್ವರ್ ಬಾಯ್ ಪಾತ್ರಗಳಿಗೆ ಆಮೀರ್ ಖಾನ್, ಸಲ್ಮಾನ್ ಖಾನ್ ಇದ್ದರು. ಇವರೆಲ್ಲರಿಗೆ ಹೋಲಿಸಿದರೆ, ಅಜಯ್ ದೇವಗನ್ ಏನೇನೂ ಅಲ್ಲ. ಅಷ್ಟೇನೂ ಚೆಲುವಲ್ಲದ ಗಂಭೀರವಾದ ಮುಖ, ಗಟ್ಟಿ ಆಳಲ್ಲ, ಲವ್ವರ್ ಬಾಯ್ ಪಾತ್ರಕ್ಕೆ ಚೂರೂ ಸೂಟ್ ಆಗುವುದಿಲ್ಲ ಎಂದು ಬಾಲಿವುಡ್ ಅನುಮಾನದಿಂದಲೇ ನೋಡಿತ್ತು. ಅವರಿಗಿದ್ದ ಅರ್ಹತೆ ಎರಡೇ. ಒಂದು, ಅವರು ವೀರೂ ದೇವಗನ್ ಎಂಬ ಬಾಲಿವುಡ್​ನ ಜನಪ್ರಿಯ ಸಾಹಸ ನಿರ್ದೇಶಕರ ಮಗ. ಇನ್ನೊಂದು, ಎಂತಹ ಸ್ಟಂಟ್​ಗಳನ್ನು ಬೇಕಾದರೂ ಧೈರ್ಯದಿಂದ ಮಾಡುವ ಛಾತಿ. ಇವೆರಡನ್ನು ಬಳಸಿಕೊಂಡೇ ಅಜಯ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ‘ಫೂಲ್ ಔರ್ ಕಾಂಟೇ’ ಚಿತ್ರದಲ್ಲಿ 2 ಬೈಕ್​ಗಳ ಮೇಲೆ ಕಾಲಿಟ್ಟುಕೊಂಡು ಎಲ್ಲರ ಗಮನಸೆಳೆದರು.

ಇದೀಗ ಚಿತ್ರರಂಗದಲ್ಲಿ ‘ಅಜೇಯ 30’ ವರ್ಷಗಳನ್ನು ಪೂರೈಸಿದ್ದಾರೆ. ನಟರಾಗಿ, ನಿರ್ದೇಶಕರಾಗಿ, ನಿರ್ವಪಕರಾಗಿ ಹಲವು ಅವತಾರಗಳನ್ನು ಎತ್ತಿ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದಾರೆ. ಹೆಚ್ಚೆಂದರೆ ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸಬಹುದು ಎಂಬ ಬಾಲಿವುಡ್​ನ ಭವಿಷ್ಯವನ್ನು ಸುಳ್ಳು ಮಾಡಿ, 30 ವರ್ಷಗಳ ಸುದೀರ್ಘ ಪಯಣವನ್ನು ಇತ್ತೀಚೆಗಷ್ಟೇ ಮುಗಿಸಿದ್ದಾರೆ. ಅಜಯ್ ಅವರ ಈ ಸಾಧನೆಗೆ ಅಮಿತಾಭ್ ಬಚ್ಚನ್, ಅಕ್ಷಯ್ ಕುಮಾರ್ ಮುಂತಾದವರು ಶುಭಾಶಯ ಕೋರಿದ್ದಾರೆ. ಮೊದಲೇ ಹೇಳಿದಂತೆ, ಅಜಯ್ ಚಿತ್ರರಂಗಕ್ಕೆ ಬಂದ ಹೊಸದರಲ್ಲಿ ವಾತಾವರಣ ಅವರಿಗೆ ಪೂರಕವಾಗಿರಲಿಲ್ಲ. ಅವರಿಗಿಂತ ಪ್ರತಿಭಾವಂತರು, ಸ್ಪುರದ್ರೂಪಿಗಳು, ಪ್ರಭಾವಿಗಳು ಚಿತ್ರರಂಗದಲ್ಲಿದ್ದರು. ಅವರೆಲ್ಲರ ನಡುವೆ ಗುದ್ದಾಡಿ, ಉಳಿಯುವುದು ಅಷ್ಟು ಸುಲಭವಾಗಿರಲಿಲ್ಲ. ಇದು ಗೊತ್ತಿದ್ದರಿಂದಲೇ, ಅಜಯ್ ಆತುರ ಮಾಡಲಿಲ್ಲ. ಪ್ರಯೋಗಗಳನ್ನು ಮಾಡುವುದಕ್ಕೆ ಹೋಗಲಿಲ್ಲ. ನಿಧಾನಕ್ಕೆ ಹೆಜ್ಜೆ ಇಟ್ಟರು. ಚಿತ್ರರಂಗಕ್ಕೆ ಕಾಲಿಟ್ಟು ಎಷ್ಟೋ ವರ್ಷಗಳ ಕಾಲ ಬೇರೆ ಏನನ್ನೂ ಪ್ರಯತ್ನಿಸಲೇ ಇಲ್ಲ.‘ಫೂಲ್ ಔರ್ ಕಾಂಟೆ’ ಚಿತ್ರದಲ್ಲಿ ಸಿಕ್ಕ ಆಕ್ಷನ್ ಹೀರೋ ಪಾತ್ರವನ್ನೇ ಮುಂದುವರಿಸಿದರು. ‘ಜಿಗರ್’, ‘ಸಂಗ್ರಾಮ್, ‘ಶಕ್ತಿಮಾನ್’, ‘ದಿಲ್​ವಾಲೆ’, ‘ವಿಜಯಪಥ್’ ಮುಂತಾದ ಆಕ್ಷನ್ ಲವ್​ಸ್ಟೋರಿಗಳಲ್ಲೇ ನಟಿಸಿದರು. ಚಿತ್ರಗಳು ಹಿಟ್ ಆಗುತ್ತಿದ್ದವೇ ಹೊರತು, ಅಜಯ್ ಎಂತಹ ನಟ ಎಂದು ಸಾಬೀತಾಗಿರಲಿಲ್ಲ. ಅದು ಗೊತ್ತಾಗುವುದಕ್ಕೆ ಏಳು ವರ್ಷಗಳೇ ಬೇಕಾದವು. 1998ರಲ್ಲಿ ಬಿಡುಗಡೆಯಾದ ‘ಜಕ್ಮ’, ಅಜಯ್ ಅವರ ಪ್ರತಿಭೆಯನ್ನು ತೋರಿಸುವುದರ ಜತೆಗೆ, ಅವರಿಗೆ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ನಟ ಪಶಸ್ತಿಯೂ ಸಿಕ್ಕಿತು.

ಅಲ್ಲಿಂದ ಅಜಯ್ ಕ್ರಮೇಣ ತಮ್ಮ ಹಾದಿ ಬದಲಾಯಿಸಿದರು. ಕಾಮಿಡಿ ಮಾಡಿದರು. ನೆಗೆಟಿವ್ ಪಾತ್ರದಲ್ಲಿ ಮಿಂಚಿದರು. ಭಗತ್ ಸಿಂಗ್​ರಂತಹ ಅಪ್ಪಟ ದೇಶಭಕ್ತರಾದರು. ಹೀಗೆ ಚಿತ್ರದಿಂದ ಚಿತ್ರಕ್ಕೆ ವಿಭಿನ್ನ ಪಾತ್ರಗಳತ್ತ ಹೆಜ್ಜೆ ಹಾಕಿದ ಅಜಯ್, ಆ ನಂತರ ಯಾವುದೋ ಒಂದು ಜಾನರ್​ಗೆ ಸೀಮಿತಗೊಳ್ಳಲಿಲ್ಲ. ‘ಸಿಂಗಂ’ ಆಗಿ ಘರ್ಜಿಸುವುದರ ಜತೆಗೆ, ‘ಗೋಲ್ಮಾಲ್’ ಮಾಡಿ ನಗಿಸಿದರು. ಹೀಗೆ ಯಾವುದೇ ಜಾನರ್​ಗೆ ಅಂಟಿಕೊಳ್ಳದೆಯೇ, ಎಲ್ಲ ತರಹದ ಪಾತ್ರಗಳನ್ನೂ ಮಾಡುವುದಕ್ಕೆ ಅಜಯ್ಗೆ ಸಾಧ್ಯವಾಯಿತು. ಅದೇ ಕಾರಣಕ್ಕೆ ‘ತಾನ್ಹಾಜಿ’ಯಲ್ಲಿ ಸೆಂಚೂರಿ ಬಾರಿಸುವುದಕ್ಕೆ ಸಾಧ್ಯವಾಯಿತು. ಬಾಲಿವುಡ್​ನಲ್ಲಿ ಕೆಲವು ನಟರು ಮಾತ್ರ 100 ಚಿತ್ರಗಳಲ್ಲಿ ನಟಿಸುವ ಹೆಗ್ಗಳಿಕೆ ಹೊಂದಿದ್ದು, ಆ ಸಾಲಿಗೆ ಅಜಯ್ ದೇವಗನ್ ಸಹ ಸೇರಿದ್ದಾರೆ. ಬಹುಶಃ ಅಷ್ಟೊಂದು ಸಂಖ್ಯೆಯ ಚಿತ್ರಗಳಲ್ಲಿ ಹೀರೊ ಆಗಿ ನಟಿಸಿದ ಇನ್ನೊಬ್ಬ ಹೀರೋ ಅವರ ನಂತರದ ತಲೆಮಾರುಗಳಲ್ಲಿ ಸಿಗುವುದು ಕಷ್ಟವೇ. 30 ವರ್ಷಗಳ ನಂತರವೂ ಅಜಯ್ ಈಗಲೂ ಬೇಡಿಕೆಯ ನಟರೇ. ಕೈಯಲ್ಲಿ ನಾಲ್ಕೈದು ಚಿತ್ರಗಳಿವೆ. ಹೊಸಬರು ಅವರ ಜತೆಗೆ ಕೆಲಸ ಮಾಡುವುದಕ್ಕೆ ಹಾತೊರೆಯುತ್ತಿದ್ದಾರೆ. ಆದರೆ, ಅಜಯ್ಗೆ ಯಾವುದೇ ಆತುರವಿಲ್ಲ. ಏಕಾಏಕಿ ಏನೋ ಮಾಡಿಬಿಡಬೇಕು ಎಂಬ ಕಾತುರವಿಲ್ಲ. ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗ ಎಷ್ಟು ನಿರ್ಭಾವುಕರಾಗಿದ್ದರೋ, ಈಗಲೂ ಅಷ್ಟೇ ನಿರ್ಭಾವುಕರಾಗಿದ್ದಾರೆ. ‘ಪೂಲ್ ಔರ್ ಕಾಂಟೆ’ ಚಿತ್ರದಲ್ಲಿ ಅಜಯ್, ‘ತೇರೆ ಪಾಸ್ ಜಾಗಿರ್ ಹೇ ... ತೋ ಮೇರೆ ಪಾಸ್ ಜಿಗರ್ ಹೇ ...’ ಎಂಬ ಸಂಭಾಷಣೆ ಹೊಡೆದಿದ್ದರು. ಅದರಂತೆ ಇಷ್ಟು ದಿನ ಧೈರ್ಯವಾಗಿ ಹೆಜ್ಜೆ ಹಾಕಿದ್ದರು. ಈಗಲೂ ಅದೇ ಮುಂದುವರಿಯುತ್ತದೆ ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net