ತಿರುಗಿ ನೋಡುವಷ್ಟರಲ್ಲಿ ಕೈ ಸೊಂಟದ ಮೇಲಿತ್ತು: ಶೇರ್​ ಆಟೋದಲ್ಲಿ ನಡೆದ ಕಹಿ ಘಟನೆ ಬಿಚ್ಚಿಟ್ಟ ನಟಿ ಐಶ್ವರ್ಯಾ

Aishwarya Rajesh
Published on

ಚೆನ್ನೈ: ಸಾಮಾನ್ಯ ಯುವತಿಯರು ಮಾತ್ರವಲ್ಲ. ಅನೇಕ ಸೆಲೆಬ್ರಿಟಿಗಳು ಹಾಗೂ ಉನ್ನತ ಸ್ಥಾನದಲ್ಲಿರುವ ಮಹಿಳೆಯರು ಕೂಡ ತಮ್ಮ ಜೀವನದಲ್ಲಿ ಒಮ್ಮೆಯಾದರೂ ಕಹಿ ಘಟನೆಯನ್ನು ಎದುರಿಸಿರುತ್ತಾರೆ. ಅದರಲ್ಲೂ ಸಿನಿಮಾ ನಟಿಯರಿಗಂತೂ ಇಂಡಸ್ಟ್ರಿ ಒಳಗೂ ಮತ್ತು ಹೊರಗೂ ಇಂತಹ ಕಹಿ ಘಟನೆಗಳು ಸಾಮಾನ್ಯವಾಗಿವೇ. ಅನೇಕರು ಇದರ ಬಗ್ಗೆ ಹೇಳಿಕೊಳ್ಳುವುದಿಲ್ಲ. ಆದರೆ, ಕೆಲವರು ತಮಗಾದ ಕಹಿ ಘಟನೆಯ ಬಗ್ಗೆ ಮುಕ್ತವಾಗಿ ಮಾತನಾಡುತ್ತಾರೆ. ಆ ಸಾಲಿಗೆ ಇದೀಗ ನಟಿ ಐಶ್ವರ್ಯ ರಾಜೇಶ್​ ಸೇರಿಕೊಂಡಿದ್ದಾರೆ.

ಇತ್ತೀಚೆಗೆ ನಡೆದ ಮಾಧ್ಯಮ ಸಂದರ್ಶನವೊಂದರಲ್ಲಿ ಐಶ್ವರ್ಯಾ ರಾಜೇಶ್ ತನ್ನ ಹಿಂದಿನ ಕಹಿ ಘಟನೆಯನ್ನು ನೆನೆದಿದ್ದಾರೆ. ಕಾಲೇಜು ದಿನಗಳಲ್ಲಿ ಒಮ್ಮೆ ಫ್ರೆಂಡ್​​ ಮನೆಗೆ ಭೇಟಿ ನೀಡಲು ಶೇರ್​ ಆಟೋವನ್ನು ಹತ್ತಿದೆ. ಈ ವೇಳೆ ಪಕ್ಕದ ಸೀಟಿನಲ್ಲಿ ಒಬ್ಬ ಯುವಕ ಕುಳಿತಿದ್ದ. ನಾನು ಒಂದು ಬದಿಯಲ್ಲಿ ಕುಳಿತು, ರಸ್ತೆ ಕಡೆ ನೋಡುತ್ತಿದ್ದೆ. ಈ ವೇಳೆ ಏನೋ ನಡೆಯುತ್ತಿರುವಂತೆ ಭಾಸವಾಯಿತು. ತಕ್ಷಣ ಪಕ್ಕಕ್ಕೆ ನೋಡಿದಾಗ ಯುವಕನ ಕೈ ನನ್ನ ಸೊಂಟದ ಮೇಲೆ ಇತ್ತು. ಇದರಿಂದ ಒಂದು ಕ್ಷಣ ನಾನು ಗಾಬರಿಗೊಂಡೆ. ಇದಾದ ಬಳಿಕ ಆತನನ್ನು ಗದರಿಸಿ ಆಟೋದಿಂದ ಕೆಳಗೆ ಇಳಿಸಿದೆ ಎಂದು ಐಶ್ವರ್ಯಾ ಹೇಳಿದರು.

ಈ ಘಟನೆಯನ್ನು ನಾನೇಕೆ ಹಂಚಿಕೊಂಡೆ ಅಂದರೆ, ಕಿರುಕುಳದ ವಿರುದ್ಧ ಮಾತನಾಡುವ ಮತ್ತು ನಿಲುವು ತೆಗೆದುಕೊಳ್ಳುವ ಮಹತ್ವವನ್ನು ಒತ್ತಿಹೇಳುವುದಕ್ಕಾಗಿ ಎಂದರು.

ಐಶ್ವರ್ಯಾ ರಾಜೇಶ್​ ತಮಿಳು ಸಿನಿಮಾ ರಂಗದಲ್ಲಿ ಮುಂಚೂಣಿಯಲ್ಲಿರುವ ನಟಿಯರಲ್ಲಿ ಒಬ್ಬರಾಗಿದ್ದಾರೆ. ಕೇವಲ ನಟಿ ಮಾತ್ರವಲ್ಲದೆ, ನೃತ್ಯಗಾರ್ತಿ ಮತ್ತು ಹೋಸ್ಟ್​ ಕೂಡ ಹೌದು. ಅವರೋರುಮ್ ಇವರೋರುಮ್ ಸಿನಿಮಾ ಮೂಲಕ 2011ರಲ್ಲಿ ಕಾಲಿವುಡ್​ ಪದಾರ್ಪಣೆ ಮಾಡಿದ ಐಶ್ವರ್ಯಾ ತಮ್ಮ ಅಮೋಘ ಅಭಿನಯದ ಕಾರಣದಿಂದಾಗಿ ಅನೇಕ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ತಮಿಳು ಮಾತ್ರವಲ್ಲದೆ, ತೆಲುಗಿನಲ್ಲೂ ಐಶ್ವರ್ಯಾ ಗುರುತಿಸಿಕೊಳ್ಳುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net