

2019ರಲ್ಲಿ ಬಾಲಿವುಡ್ನಲ್ಲಿ ‘ಮೈ ಜರೂರ್ ಆವುಂಗಾ’ ಸಿನಿಮಾ ತೆರೆಕಂಡಿದ್ದನ್ನು ಬಿಟ್ಟರೆ, ಅಲ್ಲಿಂದ ಇಲ್ಲಿಯವರೆಗೂ ನಟಿ ಐಂದ್ರಿತಾ ರೇ ಅಭಿನಯದ ಬೇರೆ ಸಿನಿಮಾ ತೆರೆಗೆ ಬಂದಿಲ್ಲ. ಚಿತ್ರಗಳಿದ್ದರೂ ಕೋವಿಡ್ ಹಿನ್ನೆಲೆಯಲ್ಲಿ ಸಾಧ್ಯವಾಗಿರಲಿಲ್ಲ. ಇದೀಗ ಎರಡು ವರ್ಷದ ಬಳಿಕ, ಅಕ್ಟೋಬರ್ 1ಕ್ಕೆ ಐಂದ್ರಿತಾ ಅಭಿನಯದ ಹಿಂದಿ ಚಿತ್ರ ಬಿಡುಗಡೆ ಆಗುತ್ತಿದೆ. ಅದರ ಹೆಸರು ‘ಭವೈ’. ‘ಸ್ಕ್ಯಾಮ್ 1992’ ವೆಬ್ಸಿರೀಸ್ ಮೂಲಕ ಬಾಲಿವುಡ್ನಲ್ಲಿ ಸಂಚಲನ ಸೃಷ್ಟಿಸಿರುವ ಪ್ರತೀಕ್ ಗಾಂಧಿ ಇಲ್ಲಿ ನಾಯಕ. ‘ಭವೈ’ಗೂ ಮೊದಲು ಈ ಚಿತ್ರಕ್ಕೆ ‘ರಾವಣ್ ಲೀಲಾ’ ಶೀರ್ಷಿಕೆ ಇಡಲಾಗಿತ್ತು. ಟ್ರೇಲರ್ ಬಿಡುಗಡೆ ಬಳಿಕ ಕೆಲ ವಿವಾದ ಸೃಷ್ಟಿಯಾಗಿದ್ದರಿಂದ ಕಾರಣಾಂತರಗಳಿಂದ ‘ಭವೈ’ ಆಗಿ ಬದಲಾಯಿತು. ಪಕ್ಕಾ ಪ್ರೇಮಕಥೆ ಇರುವ ಈ ಚಿತ್ರದಲ್ಲಿ ಐಂದ್ರಿತಾ ಸೀತೆಯಾಗಿ ಕಾಣಿಸಿಕೊಂಡಿದ್ದಾರೆ.
ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಐಂದ್ರಿತಾ, ‘ನಾಟಕ ಕಂಪನಿಯೊಂದರಲ್ಲಿನ ಕಲಾವಿದೆಯಾಗಿ ಕಾಣಿಸಿಕೊಂಡಿ ದ್ದೇನೆ. ಒಂದೊಳ್ಳೆ ಪಾತ್ರದ ಮೂಲಕ ಮತ್ತೆ ಬಾಲಿವುಡ್ ಅವಕಾಶ ಸಿಕ್ಕಿದೆ. ಕರೊನಾ ತಗ್ಗಿದ ಹಿನ್ನೆಲೆಯಲ್ಲಿ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿರುವುದರಿಂದ ಪ್ರೇಕ್ಷಕರನ್ನು ನೋಡಲು ಕಾತರದಿಂದ ಇದ್ದೇನೆ’ ಎನ್ನುತ್ತಾರೆ. ಇದು ಸದ್ಯ ಬಿಡುಗಡೆ ಆಗುತ್ತಿರುವ ಚಿತ್ರದ ಸುದ್ದಿಯಾದರೆ, ಇದನ್ನು ಹೊರತುಪಡಿಸಿ ಖ್ಯಾತ ನಿರ್ದೇಶಕ ವಿಕ್ರಮ್ ಭಟ್ ಅವರ ಹಾರರ್ ಥ್ರಿಲ್ಲರ್ ಶೈಲಿಯ ‘ಕೋಲ್ಡ್’ ಚಿತ್ರದಲ್ಲಿಯೂ ಐಂದ್ರಿತಾ ನಟಿಸಲಿದ್ದಾರೆ. ಕನ್ನಡದಲ್ಲೊಂದು ಹೊಸ ಚಿತ್ರವನ್ನು ಅವರು ಒಪ್ಪಿಕೊಂಡಿದ್ದು, ಮುಂದಿನ ತಿಂಗಳಿನಿಂದ ಈ ಎರಡು ಚಿತ್ರಗಳ ಶೂಟಿಂಗ್ ಶುರುವಾಗಲಿದೆ. ಇನ್ನುಳಿದಂತೆ ‘ಗರುಡ’, ‘ಪ್ರೇಮಂ ಪೂಜ್ಯಂ’, ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರಗಳ ಕೆಲಸಗಳು ಮುಗಿದಿದ್ದು, ಬಿಡುಗಡೆಗೆ ಸಿದ್ಧವಾಗಿವೆ.