

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ಅವರ ಅಸಹಜ ಸಾವು ದಿನದಿಂದ ದಿನಕ್ಕೆ ಹೊಸ ರೂಪ ಪಡೆಯುತ್ತಿದೆ. ಈ ವಿಚಾರದಲ್ಲಿ ಸಿಬಿಐ ತನಿಖೆಯನ್ನು ಮುಂದುವರೆಸಿದ್ದು, ಈ ಮಧ್ಯೆ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ನ (ಏಮ್ಸ್) ವೈದ್ಯರೊಬ್ಬರ ಹೇಳಿಕೆ ಈ ಪ್ರಕರಣವನ್ನು ಇನ್ನಷ್ಟು ಜಟಿಲಗೊಳಿಸಿದೆ.
ಸುಶಾಂತ್ ಸಿಂಗ್ ರಜಪೂತ್ ಅವರ ಪೋಸ್ಟ್ ಮಾರ್ಟಂ ಪರಿಶೀಲಿಸಿದ್ದ ಏಮ್ಸ್ನ ವೈದ್ಯರ ತಂಡವು, ಇತ್ತೀಚೆಗೆ ಸುಶಾಂತ್ ಅವರ ಸಾವು, ಆತ್ಮಹತ್ಯೆ ಎಂದು ಹೇಳಿತ್ತು. ಸುಶಾಂತ್ ಅವರು ಉಸಿರುಗಟ್ಟಿ ಸತ್ತಿದ್ದಾರೆ ಎಂದು ತಿಳಿಸಿತ್ತು.
ಆದರೆ, ಈಗ ಆ ತಂಡದ ಮುಖ್ಯಸ್ಥರಾಗಿ ಕೆಲಸ ಮಾಡಿದ್ದ ಡಾ ಸುಧೀರ್ ಗುಪ್ತಾ ಅವರು ಪೊಲೀಸರಿಗೆ ಹೇಳಿಕೆಯೊಂದನ್ನು ನೀಡಿದ್ದು, ಇದು ಕೊಲೆ ಎಂದು ಅವರು ಹೇಳಿದ್ದಾರೆ ಎಂದು ರಿಪಬ್ಲಿಕ್ ಟಿವಿ ವರದಿ ಮಾಡಿದೆ. ಆಗಸ್ಟ್ 22ರಂದು ಸುಧೀರ್ ಅವರು ಪೊಲೀಸರಿಗೆ ಈ ವಿಚಾರವಾಗಿ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಟೈಮ್ಸ್ ನವ್ ವರದಿ ಮಾಡಿದ್ದು, ಅದರ ಪ್ರಕಾರ ಏಮ್ಸ್ ತಂಡದವರು, ಈ ಹಿಂದೆ ನೀಡಿದ ಹೇಳಿಕೆಗೆ ಬದ್ಧರಾಗಿದ್ದಾರಂತೆ.
ಇದಕ್ಕೂ ಮುನ್ನ, ಡಾ. ಸುಧೀರ್ ಗುಪ್ತಾ ನೇತೃತ್ವದ ಏಳು ವೈದ್ಯರ ತಂಡವು ಎಲ್ಲಾ ನಿಟ್ಟಿನಲ್ಲಿ ಪರಿಶೀಲಿಸಿದ್ದು, ಅದರ ಪ್ರಕಾರ ಸುಶಾಂತ್ ಅವರ ಸಾವು ಉಸಿರುಗಟ್ಟಿದ್ದರಿಂದ ಉಂಟಾಗಿತ್ತಂತೆ. ದೇಹದ ಯಾವುದೇ ಭಾಗದಲ್ಲಿ ಇಂಜ್ಯುರಿಗಳು ಕಂಡುಬರದ ಹಿನ್ನೆಲೆಯಲ್ಲಿ ಇದು ಆತ್ಮಹತ್ಯೆ ಎಂದು ಹೇಳಲಾಗಿತ್ತು.
ಇದನ್ನೂ ಓದಿ: ಮೀಟೂ ಅಭಿಯಾನವೇ ಫೇಕ್ … ಹೊಸ ಬಾಂಬ್ ಸಿಡಿಸಿದ ಪಾಯಲ್
ಡಾ. ಗುಪ್ತಾ ಅವರ ಆಡಿಯೋ ಟೇಪ್ ಬಗ್ಗೆ ಅವರಾಗಲೀ ಅಥವಾ ಅವರ ತಂಡದ ಇತರೆ ಸದಸ್ಯರಾಗಲೀ ಯಾವ ರೀತಿಯ ಹೇಳಿಕೆ ನೀಡುತ್ತಾರೆ ಎಂಬ ಕುತೂಹಲ ಈಗ ಎಲ್ಲರಲ್ಲೂ ಮನೆಮಾಡಿದೆ.