ನವೆಂಬರ್ 26ರಂದು 'ಅಗೋಳಿ ಮಂಜಣ್ಣನ' ಟೀಸರ್​ ...

Agolli Manjanna - Final
Published on

ಬೆಂಗಳೂರು: ತುಳುನಾಡಿನ ವೀರಪುರುಷ ಎಂದೇ ಹೆಸರಾದ ಅಗೋಳಿ ಮಂಜಣ್ಣ ಕುರಿತು ಸದ್ದಿಲ್ಲದೆ ಚಿತ್ರವೊಂದು ತಯಾರಾಗಿದೆ. ಬರೀ ತುಳುವಿನಲ್ಲಷ್ಟೇ ಅಲ್ಲ, ಅದರ ಜತೆಗೆ ಕನ್ನಡ ಮತ್ತು ಮರಾಠಿಯಲ್ಲೂ ಈ ಚಿತ್ರ ಸಿದ್ಧಗೊಳ್ಳುತ್ತಿದ್ದು, ಈ ತ್ರಿಭಾಷಾ ಚಿತ್ರದ ಟೀಸರ್​ನ್ನು ಇದೇ ನವೆಂಬರ್​ 26ರಂದು ಕಾರ್ಕಳದ ಕಟೀಲ್​ ಇಂಟರ್​ನ್ಯಾಷನಲ್​ ಹೋಟೆಲ್​ ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ.

'ಸವಾರಿ' ಚಿತ್ರದ 'ಮರಳಿ ಮರೆಯಾಗಿ ...' ಹಾಡಿನ ಮೂಲಕ ಎಲ್ಲರ ಗಮನಸೆಳೆದ ಗೀತರಚನೆಕಾರ ಮತ್ತು ನಿರ್ದೇಶಕ ಸುಧೀರ್​ ಅತ್ತಾವರ್​, 'ಅಗೋಳಿ ಮಂಜಣ್ಣ' ಚಿತ್ರವನ್ನು ನಿರ್ದೇಶಿಸುತ್ತಿದ್ದು, ಅಂತಾರಾಷ್ಟ್ರೀಯ ಕ್ರೀಡಾಪಟು ಮತ್ತು 'ಕೋಟಿ ಚೆನ್ನಯ' ಧಾರಾವಾಹಿಯ ರೋಹಿತ್​ ಕುಮಾರ್​ ಕಟೀಲು, ಅಗೋಳಿ ಮಂಜಣ್ಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸುಮಾರು ಹದಿನೇಳನೇ ಶತಮಾನದ ಮಧ್ಯದಲ್ಲಿ ಮಂಗಳೂರಿನ ಸುತ್ತ ಮುತ್ತ ಜೀವಿಸಿದ್ದ ಪರಮ ಪರಾಕ್ರಮಿಯಾದ ಅಗೋಳಿ ಮಂಜಣ್ಣನ ಕುರಿತು ಯಕ್ಷಗಾನ ಮತ್ತು ಪಾಡ್ದನಗಳಲ್ಲಿ ಉಲ್ಲೇಖವಿದೆ. ಆದರೂ, ತುಳುನಾಡಿನ ವೀರಪುರುಷರಾಗಿದ್ದ ಕೋಟಿ-ಚೆನ್ನಯ್ಯ ಮತ್ತು ಕಾಂತಬಾರೆ-ಬುಧಬಾರೆಯರಿಗೆ ಪ್ರಾಪ್ತಿಯಾಗಿರುವ ದೈವತ್ವ ಅಗೋಳಿ ಮಂಜಣ್ಣನಿಗೆ ಪ್ರಾಪ್ತಿಯಾಗಿಲ್ಲ ಎನ್ನಬಹುದು.

ಈತನ ಬಗ್ಗೆ ಪಂಜ ಮಂಗೇಷರಾಯರು, ಮಂಜೇಶ್ವರ ಗೋವಿಂದ ಪೈಗಳು ತಮ್ಮ ಗ್ರಂಥಗಳಲ್ಲಿ ಪ್ರಚಲಿತದಲ್ಲಿದ್ದ ಜನಪದ ಕಥೆಗಳನ್ನು ಉಲ್ಲೇಖಿಸಿದ್ದರೂ, ಈ ಇತಿಹಾಸ ಪುರುಷನ ಬಗ್ಗೆ ಸಮಗ್ರ ಅಧ್ಯಯನ ಮತ್ತು ಗ್ರಂಥ ರೂಪದ ದಾಖಲೆಗಳು ಎಲ್ಲೂ ಕಂಡುಬರುತ್ತಿಲ್ಲ. ಈತನ ಕಾಲಘಟ್ಟ ಮತ್ತು ವೈವಾಹಿಕ ಜೀವನದ ಬಗ್ಗೆಯೂ ಸಾಕಷ್ಟು ಗೊಂದಲಗಳಿವೆ. ಈ ನಿಟ್ಟಿನಲ್ಲಿ ನಿರ್ದೇಶಕ ಸುಧೀರ್​ ಅತ್ತಾವರ್​ ಕಳೆದ ಕೆಲವು ತಿಂಗಳುಗಳಿಂದ ಸಾಕಷ್ಟು ಸಂಶೋಧನೆ ಮಾಡಿ, ಹಲವಾರು ಪುಸ್ತಕಗಳನ್ನು ಓದುವುದರ ಜತೆಗೆ, ಹಲವು ಇತಿಹಾಸಕಾರರು ಮತ್ತು ಸಂಶೋಧಕರಿಂದ ಮಾಹಿತಿಯನ್ನು ಸಂಗ್ರಹಿಸಿ ಇದೀಗ ಚಿತ್ರಕಥೆ ಸಿದ್ಧಪಡಿಸುತ್ತಿದ್ದಾರೆ.

ಈ ಚಿತ್ರದಲ್ಲಿ ರೋಹಿತ್​ ಕುಮಾರ್​ ಜತೆಗೆ ಭಾವನಾ, 'ದುನಿಯಾ' ರಶ್ಮಿ, ವಿನಯಾ ಪ್ರಸಾದ್​, ರಾಮಕೃಷ್ಣ, ಆಳ್ವಾಸ್​ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್​ ಆಳ್ವ, ಮಾಜಿ ಸಚಿವ ಅಭಯಚಂದ್ರ ಜೈನ್​ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜತೆಗೆ ಹಿಂದಿ ಮತ್ತು ಮರಾಠಿ ಭಾಷೆಯ ಹಲವು ಪ್ರಮುಖ ಕಲಾವಿದರು ಈ ಚಿತ್ರಕ್ಕಾಗಿ ಬಣ್ಣ ಹಚ್ಚುತ್ತಿದ್ದಾರೆ. ಇನ್ನು ಕನ್ನಡದ ಜನಪ್ರಿಯ ಸಂಗೀತ ನಿರ್ದೇಶಕ ಗುರುಕಿರಣ್​ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದು, ವಿದ್ಯಾಧರ್ ಶೆಟ್ಟಿ ಅವರ ಸಂಕಲನ ವಿದೆ. ಮುಂಬೈನ ಸಕ್ಸಸ್ ಫಿಲ್ಮ್ಸ್ ಪ್ರೊಡಕ್ಷನ್ಸ್​ನಡಿ ಈ ಚಿತ್ರ ತಯಾರಾಗುತ್ತಿದೆ.

ಅಂದಹಾಗೆ, ನವೆಂಬರ್​ 26ರಂದು ಅಗೋಳಿ ಮಂಜಣ್ಣನನ್ನು ಪರಿಚಯಿಸುವ ಟೀಸರ್​ ಬಿಡುಗಡೆ ಮಾಡಲಾಗುತ್ತಿದ್ದು, ಚಿತ್ರದ ಚಿತ್ರೀಕರಣ ಜನವರಿ 15ರಿಂದ ಮಂಗಳೂರು ಸುತ್ತಮುತ್ತ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net