ನಟ ವಿಜಯ್​ ಬೆನ್ನಲ್ಲೇ ಸಿನಿಮಾ ರಂಗಕ್ಕೆ ಗುಡ್​ಬೈ ಹೇಳಲು ಮುಂದಾದ ನಟಿ ತ್ರಿಷಾ? ಕಾರಣ ಹೀಗಿದೆ... Trisha

Actress Trisha
Published on

Trisha : ಬಹುಭಾಷಾ ನಟಿ ತ್ರಿಷಾ (Trisha) ಅವರವನ್ನು ಪರಿಚಯಿಸುವ ಅಗತ್ಯವಿಲ್ಲ. ತಮಿಳು, ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್​ ನಟಿಯಾಗಿರುವ ತ್ರಿಷಾ ಇಳಯದಳಪತಿ ವಿಜಯ್​, ಸೂರ್ಯ, ವಿಕ್ರಮ್, ಪ್ರಭಾಸ್​, ಚಿರಂಜೀವಿ, ಅಜಿತ್​, ಸಿಂಬು ಸೇರಿದಂತೆ ಸ್ಟಾರ್​ ನಟರ ಜೊತೆ ಅಭಿನಯಿಸಿದ್ದಾರೆ. ಕನ್ನಡದಲ್ಲೂ ದಿವಂಗತ ನಟ ಪುನೀತ್​ ರಾಜ್​ಕುಮಾರ್​ (Puneeth Rajkumar) ಅಭಿನಯದ ಪವರ್​ಸ್ಟಾರ್​ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ.

ಕೊನೆಯದಾಗಿ ಬಿಡುಗಡೆಯಾದ ಅವರ ನಟನೆಯ ಪೊನ್ನಿಯನ್​ ಸೆಲ್ವನ್​ ಮತ್ತು ಲಿಯೋ ಸಿನಿಮಾ ಉತ್ತಮ ಯಶಸ್ಸು ಗಳಿಸಿತು. ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ತ್ರಿಷಾ ಬಿಜಿಯಾಗಿದ್ದಾರೆ. ಕಳೆದ ವರ್ಷ ತೆರೆಕಂಡ ಗೋಟ್​ ಸಿನಿಮಾದ ಹಾಡೊಂದರಲ್ಲಿ ಅತಿಥಿ ಪಾತ್ರದಲ್ಲಿ ಸೊಂಟ ಬಳುಕಿಸಿದರು. ವಿದಮುಯಾರ್ಚಿ ಮತ್ತು ಗುಡ್ ಬ್ಯಾಡ್ ಅಗ್ಲಿ ಸಿನಿಮಾಗಳಲ್ಲಿ ನಟ ಅಜಿತ್ ಜೊತೆ ನಟಿಸಿದ್ದು, ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಇದರ ಹೊರತಾಗಿ, ತ್ರಿಷಾ ಬಳಿ ಇನ್ನೂ ಅನೇಕ ಚಿತ್ರಗಳಿವೆ.

ತಾಜಾ ಸಂಗತಿ ಏನೆಂದರೆ, ತ್ರಿಷಾ ಅವರು ಸಿನಿಮಾ ರಂಗವನ್ನು ತೊರೆಯಲು ಪ್ಲಾನ್​ ಮಾಡಿದ್ದಾರೆ ಎಂಬ ಮಾತುಗಳು ಕಾಲಿವುಡ್‌ ಗಲ್ಲಿಯಲ್ಲಿ ಭಾರಿ ಚರ್ಚೆಯಾಗುತ್ತಿದೆ. ತಮಿಳು ಸಿನಿಮಾ ವಿಮರ್ಶಕ ವಲೈ ಪೆಚು ಅಂತನಾನ್ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ತ್ರಿಷಾ ಅವರು ತಮ್ಮ ತಾಯಿಯೊಂದಿಗೆ ಸಿನಿಮಾ ಬಿಡುವ ಬಗ್ಗೆ ಮಾತನಾಡಿದ್ದಾರೆ ಮತ್ತು ಇದೇ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಸಿನಿಮಾ ಬಿಡುವ ನಿರ್ಧಾರವನ್ನು ತಾಯಿ ವಿರೋಧಿಸಿದ್ದಾರೆ ಎಂದು ಅಂತನಾನ್​ ಹೇಳಿದ್ದಾರೆ.

ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಗಳು ಬಂದಿಲ್ಲ. ತ್ರಿಷಾ ಕೂಡ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಿನಿಮಾ ಬಿಟ್ಟು ರಾಜಕೀಯ ಪ್ರವೇಶಿಸಲು ತ್ರಿಷಾ ಪ್ಲಾನ್​ ಮಾಡುತ್ತಿದ್ದಾರೆ ಎಂಬ ವರದಿಗಳೂ ಇವೆ. ಕಾಲಿವುಡ್​ ಸೂಪರ್​ಸ್ಟಾರ್​ ವಿಜಯ್​ ಈಗಾಗಲೇ ಸಿನಿಮಾ ರಂಗವನ್ನು ತೊರೆದಿದ್ದಾರೆ. ಕೊನೆಯದಾಗಿ ಒಂದೇ ಒಂದು ಚಿತ್ರ ಮಾತ್ರ ಬಾಕಿ ಇದ್ದು, ಅದು ಮುಗಿದ ಬಳಿಕ ಪೂರ್ಣ ಪ್ರಮಾಣದಲ್ಲಿ ರಾಜಕೀಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ವಿಜಯ್​ ಅವರು ತಮಿಳಿಗ ವೆಟ್ರಿ ಕಳಗಂ ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದು, ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ತ್ರಿಷಾ ಕೂಡ ವಿಜಯ್ ಅವರ ಹಾದಿಯನ್ನು ಅನುಸರಿಸುತ್ತಾರಾ ಎಂದು ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net