

ಮುಂಬೈ: ಶಾರೂಖ್ ಖಾನ್ ಅಭಿನಯದ 'ಪಠಾಣ್' ಚಿತ್ರದ ಚಿತ್ರೀಕರಣವು ಇದೀಗ ಭರದಿಂದ ಸಾಗಿದ್ದು, ಕಳೆದ ಹಲವು ದಿನಗಳಿಂದ ಶಾರೂಖ್ ಅಭಿನಯದ ಹಲವು ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳುತ್ತಿದ್ದಾರೆ ನಿರ್ದೇಶಕ ಸಿದ್ಧಾರ್ಥ್ ಆನಂದ್.
ಈ ಮಧ್ಯೆ, ಚಿತ್ರದಲ್ಲಿ ಸಲ್ಮಾನ್ ಖಾನ್ ಅವರು ಅತಿಥಿಯಾಗಿ ನಟಿಸುತ್ತಿದ್ದಾರೆ ಎಂಬ ಸುದ್ದಿಯೊಂದು ಕೇಳಿಬಂದಿತ್ತು. ಸಲ್ಮಾನ್ ಖಾನ್ ಅವರು ಈಗಾಗಲೇ 'ಟೈಗರ್' ಸರಣಿಯಲ್ಲಿ ಸ್ಪೆಷಲ್ ಏಜೆಂಟ್ ಆಗಿ ನಟಿಸಿದ್ದಾರೆ. ಈಗ 'ಪಠಾಣ್' ಚಿತ್ರದಲ್ಲಿ ಏಜೆಂಟ್ ಟೈಗರ್ ಆಗಿಯೇ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಲಾಗಿತ್ತು.
ಇದೀಗ, 'ಪಠಾಣ್' ಚಿತ್ರದಲ್ಲಿ ನಟ ಹೃತಿಕ್ ರೋಶನ್ ಸಹ ಅತಿಥಿಯಾಗಿ ನಟಿಸುತ್ತಾರೆ ಎಂದು ಹೇಳಲಾಗಿದೆ. ಈ ಚಿತ್ರದಲ್ಲಿ ಹಿಂದಿ ಚಿತ್ರಗಳಲ್ಲಿ ಜನಪ್ರಿಯವಾಗಿರುವ ರಾ ಏಜೆಂಟ್ಗಳ ಪಾತ್ರಗಳನ್ನು ಒಟ್ಟಾಗಿ ತರುವ ಯೋಚನೆ ನಿರ್ಮಾಪಕ ಆದಿತ್ಯ ಚೋಪ್ರಾ ಅವರಿಗಿದ್ದು, ಈ ನಿಟ್ಟಿನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವುದಕ್ಕೆ ಹೃತಿಕ್ ರೋಶನ್ ಅವರನ್ನು ಕೇಳಿಕೊಂಡಿದ್ದರಂತೆ.
ಕಳೆದ ವರ್ಷ ಬಿಡುಗಡೆಯಾದ 'ವಾರ್' ಚಿತ್ರದಲ್ಲಿ ಹೃತಿಕ್ ರೋಶನ್ ಏಜೆಂಟ್ ಕಬೀರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಆ ಚಿತ್ರ ಸೂಪರ್ ಹಿಟ್ ಆಗಿತ್ತು. ಈ ಹಿನ್ನೆಲೆಯಲ್ಲಿ, 'ಪಠಾಣ್' ಚಿತ್ರದಲ್ಲೂ ಅತಿಥಿಯಾಗಿ ಅವರು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಹಾಗೇನಾದರೂ ಆದರೆ, ಬಾಲಿವುಡ್ನ ಮೂವರು ಸೂಪರ್ಸ್ಟಾರ್ಗಳು ಒಂದೇ ಚಿತ್ರದಲ್ಲಿ ಜತೆಯಾಗಿ ನಟಿಸುವಂತಾಗಲಿದ್ದು, ಹಾಲಿವುಡ್ ಚಿತ್ರ 'ಅವೆಂಜರ್ಸ್' ಮಾದರಿಯಲ್ಲಿ ಜನಪ್ರಿಯ ಸ್ಪೆಷಲ್ ಏಜೆಂಟ್ಗಳೆಲ್ಲಾ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
'ಪಠಾಣ್' ಚಿತ್ರದಲ್ಲಿ ಶಾರೂಖ್ ಖಾನ್ಗೆ ನಾಯಕಿಯಾಗಿ ನಟಿಸುತ್ತಿದ್ದು, ಜಾನ್ ಅಬ್ರಹಾಂ ನೆಗೆಟಿವ್ ಪಾತ್ರದಲ್ಲಿ ಅಭಿನಯಿಸುತ್ತಿರುವುದು ವಿಶೇಷ.