ಕರೊನಾ ಕಾಲದಲ್ಲಿ ಪ್ರೀಮಿಯರ್​ ಆಯ್ತು ಕನ್ನಡದ ಮೊದಲ ಸಿನಿಮಾ

benki
????????????????????????????????????
Published on

ಬೆಂಗಳೂರು: ಕಳೆದ ಆರೂವರೆ ತಿಂಗಳಿಂದ ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಸಿನಿಮಾ ಕ್ಷೇತ್ರ ಸ್ಥಗಿತಗೊಂಡಿತ್ತು. ಈಗೀಗ ಶೂಟಿಂಗ್​ಗೆ ಅನುಮತಿ ನೀಡಿದ್ದರಾದರೂ, ಮೊದಲಿನ ಆ ಕಳೆ ಇನ್ನೂ ಮರುಕಳಿಸಿಲ್ಲ. ಈ ನಡುವೆ ಅಕ್ಟೋಬರ್​ 15ರಿಂದ ಚಿತ್ರಮಂದಿರ ತೆರೆಯುವುದಕ್ಕೆ ಅನ್​ಲಾಕ್​ ಅಧಿಸೂಚನೆಯಲ್ಲಿ ಕೇಂದ್ರ ಸರ್ಕಾರ ತಿಳಿಸಿತ್ತು. ಅದರಂತೆ ಕನ್ನಡದಲ್ಲಿ ಒಂದಷ್ಟು ಸಿನಿಮಾಗಳು ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿಕೊಂಡಿವೆ. ಹೀಗಿರುವಾಗಲೇ ಈ ಹೊತ್ತಲ್ಲಿ ಕನ್ನಡದ ಸಿನಿಮಾವೊಂದು ಪ್ರೀಮಿಯರ್ ಪ್ರದರ್ಶನ ಕಂಡಿದೆ! ಸದ್ಯಕ್ಕೆ ಸ್ಯಾಂಡಲ್​ವುಡ್​ನಲ್ಲಿ ಯಾರೂ ಮಾಡದ ಸಾಹಸವನ್ನು ‘ಬೆಂಕಿಯ ಬಲೆ’ ತಂಡ ಮಾಡಿದೆ.

ಹೌದು, ಮಂಗಳವಾರ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ‘ಬೆಂಕಿಯ ಬಲೆ; ಪ್ರೀತಿಯ ಕೊಲೆ’ ಚಿತ್ರದ ಬಿಡುಗಡೆ ಪೂರ್ವ ಚಿತ್ರಪ್ರದರ್ಶನವನ್ನು ಆಯೋಜಿಸಲಾಗಿತ್ತು. ಇಡೀ ಸಿನಿಮಾತಂಡ ಮತ್ತು ಒಂದಷ್ಟು ಪ್ರೇಕ್ಷಕರು ಈ ಸಿನಿಮಾವನ್ನು ಕಣ್ತುಂಬಿಕೊಂಡರು. ಇದೇ ವೇಳೆ ಚಿತ್ರದ ಬಿಡುಗಡೆಗೆ ಬಗ್ಗೆ ನಿರ್ದೇಶಕ ಮತ್ತು ನಿರ್ಮಾಪಕ ಶಿವಾಜಿ ಮಾತನಾಡಿದ್ದಾರೆ.

‘ಇದೊಂದು ಹಳ್ಳಿಗಾಡಿನ ಕಥೆ. ಅಮ್ಮನನ್ನು ಮಾರಕ ಕ್ಯಾನ್ಸರ್​ನಿಂದ ಉಳಿಸಿಕೊಳ್ಳಲು ಹೋರಾಡುವ ಮಗಳ ಕಥೆ. ನನ್ನ ಅಮ್ಮನಿಗೆ ಕ್ಯಾನ್ಸರ್ ಇತ್ತು. ಅದರಿಂದ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ ಆಸ್ಪತ್ರೆಯಲ್ಲಿನ ಸ್ಥಿತಿ ಕಂಡು, ಅದರಿಂದ ಸ್ಫೂರ್ತಿಗೊಂಡು ಈ ಸಿನಿಮಾ ಮಾಡಿದ್ದೇನೆ. ಸುದೀರ್ಘ ಮೂರು ವರ್ಷದ ಅವಧಿಯಲ್ಲಿ ಈ ಸಿನಿಮಾ ಪೂರ್ಣಗೊಳಿಸಿದ್ದೇನೆ’ ಎಂದು ಹೇಳಿಕೊಳ್ಳುತ್ತಾರೆ.

ಹಳ್ಳಿ ಜೀವನ, ಹಳ್ಳಿಯ ರಾಜಕೀಯ, ಪ್ರೀತಿ, ಪ್ರೇಮ, ಮುನಿಸು ಹೀಗೆ ಎಲ್ಲ ಅಂಶಗಳನ್ನು ಬೆರೆಸಿಕೊಂಡು ‘ಬೆಂಕಿಯ ಬಲೆ; ಪ್ರೀತಿಯ ಕೊಲೆ’ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ‘ಈ ತಿಂಗಳಾಂತ್ಯಕ್ಕೆ ನಮ್ಮ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಶೀಘ್ರದಲ್ಲಿಯೇ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲಿದ್ದೇವೆ. ಇದರಿಂದ ಬಂದ ಮೊತ್ತವನ್ನು ಕ್ಯಾನ್ಸರ್ ಪೀಡಿತರ ನೆರವಿಗೆ ನೀಡಲು ನಿರ್ಧರಿಸಿದ್ದೇವೆ’ ಎಂಬುದು ಶಿವಾಜಿ ಮಾತು.

ಪ್ರೀತಿ ಯಶು, ನಿರಂಜನ್​, ಸಲ್ಮಾನ್​, ಪವಿತ್ರ, ಮಂಜು ಮಿರ್ಲೆ, ಧೀರಜ್​ ಮತ್ತು ಲೋಕೇಶ್​ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾದಲ್ಲಿ ವಿಶೇಷ ಪಾತ್ರವೊಂದರಲ್ಲಿ ಮಂಡ್ಯ ರಮೇಶ್​ ಸಹ ಕಾಣಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net