

ವಾಷಿಂಗ್ಟನ್: ಹಾಲಿವುಡ್ನ ಜನಪ್ರಿಯ ಜೋಡಿಗಳ ಪೈಕಿ ಬೆನ್ ಅಫ್ಲೆಕ್ ಮತ್ತು ಗಾಯಕಿ ಜೆನ್ನಿಫರ್ ಲೊಪೆಜ್ ಅವರ ಜೋಡಿ ಸಹ ಪ್ರಮುಖವಾಗಿದ್ದು. 2002ರಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡು, ಬೆನ್ನಿಫರ್ ಎಂದೇ ಜನಪ್ರಿಯವಾಗಿದ್ದ ಈ ಜೋಡಿ, ಕಾರಣಾಂತರಗಳಿಂದ ದೂರವಾಗಿತ್ತು. ಈಗ ಇಬ್ಬರೂ ಹತ್ತಿರವಾಗಿದ್ದು, ಮದುವೆಯಾದರೂ ಆಶ್ಚಯರ್ವಿಲ್ಲ ಎಂದು ಹೇಳಲಾಗುತ್ತಿದೆ.
ಹೌದು, 17 ವರ್ಷಗಳಿಂದ ದೂರವಾಗಿದ್ದ ಜೆನ್ನಿಫರ್ ಮತ್ತು ಬೆನ್ ಇದೀಗ ಹತ್ತಿರವಾಗಿದ್ದಾರಂತೆ. ಇತ್ತೀಚೆಗೆ ಮೊಂಟಾನಾದಲ್ಲಿ ಅವರಿಬ್ಬರೂ ಜತೆಯಾಗಿ ಕಾಣಿಸಿಕೊಂಡಿದ್ದು, ಇಬ್ಬರೂ ಮದುವೆಯಾಗುವ ಸಾಧ್ಯತೆ ಇದೆ ಎಂಬ ಸುದ್ದಿ ಹರಡಿದೆ.
ಜೆನ್ನಿಫರ್ ಮತ್ತು ಬೆನ್ ಇಬ್ಬರೂ 2002ರಲ್ಲಿ ಪರಸ್ಪರ ಪ್ರೀತಿಸಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆಗಿನ ಕಾಲಕ್ಕೆ, ಅವರಿಬ್ಬರದ್ದೂ ಹೈಪ್ರೊಫೈಲ್ ಜೋಡಿಯಾಗಿತ್ತು. ಆದರೆ, ಅವರ ಮಧ್ಯೆ ಏನಾಯಿತೋ ಗೊತ್ತಿಲ್ಲ. ಇಬ್ಬರೂ ದೂರವಾದರು. ಜೆನ್ನಿಫರ್ ಲೊಪೇಜ್, ಮಾರ್ಕ್ ಆಂಟೋನಿ ಅವರನ್ನು ಮದುವೆಯಾದರು. ಬೆನ್, ಜೆನ್ನಿಫರ್ ಗಾರ್ನರ್ ಅವರನ್ನು ಮದುವೆಯಾದರು. ಇಬ್ಬರಿಗೂ ಮಕ್ಕಳಾಗಿತ್ತು. ಆದರೆ, ಕೆಲವೇ ವರ್ಷಗಳಲ್ಲಿ ಕಾರಣಾಂತರಗಳಿಂದ ಇಬ್ಬರ ಮದುವೆಯೂ ಮುರಿದುಬಿದ್ದಿತ್ತು.
ಆ ನಂತರ ಇಬ್ಬರೂ, ಇನ್ನೊಂದು ಸಂಬಂಧದಲ್ಲಿದ್ದರು. ಮಾಜಿ ಬೇಸ್ಬಾಲ್ ಆಟಗಾರ ಅಲೆಕ್ಸ್ ರಾಡ್ರಿಗ್ಸ್ ಅವರನ್ನು ಮದುವೆಯಾಗುವುದಕ್ಕೆ ಜೆನ್ನಿಫರ್ ಹೊರಟರೆ, ನಟಿ ಅನ್ನಾ ಡಿ ಆರ್ಮಾಸ್ ಜೊತೆಗೆ ಬೆನ್ ಮದುವೆಯಾಗುವುದಕ್ಕೆ ಮುಂದಾಗಿದ್ದರು. ಆದರೆ, ಜೆನ್ನಿಫರ್ ಮತ್ತು ಬೆನ್ ಇಬ್ಬರೂ ಆ ಸಂಬಂಧದಿಂದ ಹೊರಬಂದು ಮತ್ತೊಮ್ಮೆ ಒಂಟಿಯಾಗಿದ್ದರು.
ಹೀಗೆ ಇತ್ತೀಚಿನ ದಿನಗಳಲ್ಲಿ ಒಂಟಿಯಾಗಿದ್ದ ಜೆನ್ನಿಫರ್ ಮತ್ತು ಬೆನ್, ಮತ್ತೊಮ್ಮ ಭೇಟಿಯಾಗಿರುವುದರ ಜತೆಗೆ, ಇಬ್ಬರೂ ಮದುವೆಯಾಗುತ್ತಿದ್ದಾರೆ ಎಂಬ ಗುಸುಗುಸು ಹರಡಿದೆ. ಈ ಗುಸುಗುಸು ನಿಜವಾಗುತ್ತದಾ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.