ಎಣ್ಣೆ ಹಾಕುತ್ತಾ ಕುಡುಕರಿಗೆ ಬಿಟ್ಟಿ ಸಲಹೆ ಕೊಟ್ಟ ಕಿರಾತಕ ಬೆಡಗಿ ಓವಿಯಾ! ನೆಟ್ಟಿಗರಿಂದ ಭಾರಿ ಟೀಕೆ

Actress Oviya
Published on

ಚೆನ್ನೈ: ರಾಕಿಂಗ್​ ಸ್ಟಾರ್ ಯಶ್ ಜತೆಗೆ ಕಿರಾತಕ ಸಿನಿಮಾ ಮೂಲಕ ಚಂದನವನ ಪ್ರವೇಶಿಸಿದ್ದ ಓವಿಯಾ, ಅದಾದ ಬಳಿಕ ಮಿಸ್ಟರ್ ಮೊಮ್ಮಗ ಸಿನಿಮಾ ಮಾಡಿದ್ದರು. ಕನ್ನಡದಲ್ಲಿ ನಟಿಸಿದ್ದು ಕೇವಲ ಎರಡೇ ಸಿನಿಮಾ ಆದರೂ ಸೂಪರ್​ ಹಿಟ್​ ಕಿರಾತಕ ಸಿನಿಮಾದಿಂದಾಗಿ ಕನ್ನಡಿಗರ ಮನಸ್ಸಿನಲ್ಲಿ ನೆಲೆಸಿದ್ದಾರೆ. ತಮಿಳಿನಲ್ಲಿಯೇ ಹೆಚ್ಚು ಬಿಜಿಯಾಗಿದ್ದ ಓವಿಯಾ ಇದೀಗ ಅಲ್ಲೂ ಕೂಡ ಅವಕಾಶಗಳು ಇಲ್ಲದೆ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ.

ಸಿನಿಮಾಗಳ ಅವಕಾಶ ಕಡಿಮೆಯಾದ ಬಳಿಕ ಓವಿಯಾ, ತಮಿಳಿನ ವಿಜಯ್ ಚಾನೆಲ್​ನಲ್ಲಿ ಪ್ರಸಾರವಾದ ಬಿಗ್​ಬಾಸ್​ ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ತಮ್ಮ ವಿಭಿನ್ನ ಮ್ಯಾನರಿಸಂ​ ಮೂಲಕ ಜನಮನ್ನಣೆ ಗಳಿಸಿದರು. ಬಿಗ್​ಬಾಸ್ ಸಹ-ಸ್ಪರ್ಧಿ ಮತ್ತು ನಟ ಆರವ್ ಅವರ ಮೇಲಿನ ಪ್ರೇಮ ವಿಚಾರದಿಂದ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದರು. ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದರು. ಆದರೆ ಆರವ್ ಸಂಬಂಧವನ್ನು ಮುಂದುವರಿಸಲು ಆಸಕ್ತಿ ತೋರಿಸದ ಕಾರಣ ಓವಿಯಾ ತೊಂದರೆ ಕೊಟ್ಟರು. ಇದಲ್ಲದೆ, ಬಿಗ್ ಬಾಸ್ ಒಳಗೆ ಓವಿಯಾ ಆತ್ಮಹತ್ಯೆಗೆ ಯತ್ನಿಸಿದರು ಎಂಬ ಸುದ್ದಿಯು ಹರಿದಾಡಿತ್ತು. ಈ ಸಮಯದಲ್ಲಿ ಓವಿಯಾ ತಮ್ಮ ಅಭಿಮಾನಿಗಳಿಂದ ಉತ್ತಮ ಬೆಂಬಲವನ್ನು ಪಡೆದರು. ಆದರೆ, ಬಿಗ್​ಬಾಸ್​ ಕಾರ್ಯಕ್ರಮದಲ್ಲಿ ಮುಂದುವರಿಯಲು ಆಸಕ್ತಿ ಹೊಂದಿಲ್ಲ ಎಂದು ಹೇಳಿ ಹೊರನಡೆದರು.

ಶೋ ಮುಗಿಸಿದ ಬಳಿಕವೂ ಓವಿಯಾ ಅವರಿಗೆ ಕೆಲ ಸಿನಿಮಾಗಳಲ್ಲಿ ಮತ್ತೆ ಅವಕಾಶಗಳು ಸಿಕ್ಕವು. ಆದರೆ, ಮತ್ತೆ ಅವಕಾಶಗಳು ಕಡಿಮೆಯಾದವು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಯಾವುದೇ ವಿಚಾರದಲ್ಲೂ ಬೋಲ್ಡ್​ ಆಗಿ ಮಾತನಾಡುವ ಮೂಲಕ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಇದು ಎಣ್ಣೆ ಅಂದರೆ ಮದ್ಯದ ವಿಚಾರಕ್ಕೆ ಓವಿಯಾ ಮತ್ತೊಮ್ಮೆ ಸುದ್ದಿಯಾಗಿದೆ.

ಮದ್ಯ ಪ್ರಿಯರಿಗೆ ಓವಿಯಾ ಬಿಟ್ಟಿ ಸಲಹೆಯನ್ನು ನೀಡಿದ್ದಾರೆ. ಪಕ್ಕದಲ್ಲಿ ಎಣ್ಣೆ ಗ್ಲಾಸ್​ ಇಟ್ಟುಕೊಂಡು ಸ್ನ್ಯಾಕ್ಸ್​ ಸವಿಯುತ್ತಿರುವ ಫೋಟೋವನ್ನು ತಮ್ಮ ಇನ್​​ಸ್ಟಾಗ್ರಾಂ ಪೇಜ್​ನಲ್ಲಿ ಹಂಚಿಕೊಂಡಿರುವ ಓವಿಯಾ, ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ಬರೆದುಕೊಂಡಿದ್ದಾರೆ. ತಾವೇ ಆಲ್ಕೋಹಾಲ್​ ಸೇವಿಸುತ್ತಿರುವುದು ಒಂದೆಡೆಯಾದರೆ, ಆಲ್ಕೋಹಾಲ್​ ಡೇಂಜರ್​ ಎನ್ನುವ ಬಿಟ್ಟಿ ಸಲಹೆ ನೀಡಿದ್ದಾರೆ.

ಸದ್ಯ ಓವಿಯಾ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಫೋಟೋ ನೋಡಿದ ನೆಟ್ಟಿಗರು ತರಹೇವಾರಿ ಕಾಮೆಂಟ್​ಗಳನ್ನು ಮಾಡುತ್ತಿದ್ದಾರೆ. ಎಣ್ಣೆ ಹಾಕುತ್ತಾ ಅದನ್ನು ಕುಡಿಯಬೇಡಿ ಎಂದು ಹೇಳುತ್ತಿರುವುದು ಒಂದು ರೀತಿ ತಮಾಷೆ ಎನಿಸುತ್ತಿದೆ. ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳುವ ಸರ್ಕಾರ ಅದೇ ಮದ್ಯವನ್ನ ಹೆಚ್ಚಾಗಿ ತಯಾರಿಸಲು ಅನುಮತಿ ಕೊಡುತ್ತದೆ. ನಿಮ್ಮ ಮಾತು ಕೂಡ ಅದೇ ರೀತಿ ಇದೆ ಎಂದು ಓವಿಯಾ ಅವರ ಕಾಲೆಳೆಯುತ್ತಿದ್ದಾರೆ.

ಅಂದಹಾಗೆ ಮಲಯಾಳಂ ನಟಿ ಓವಿಯಾ ಅವರು 2010ರಲ್ಲಿ ಕಲಾವಾಣಿ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆ ನಂತರ ಮದಯನೈ ಕೂಟಂ, ಕಾಲಕಲಾಪು, ಮರೀನಾ, ಮುದರ್ ಕೂಡಂ, ಯಾಮಿರುಕಾ ಪಯಮೆಂ, 90 ಎಂಎಲ್ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇದೀಗ ಸಿನಿಮಾಗಳ ಅವಕಾಶಗಳಿಗಾಗಿ ಎದುರು ನೋಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net