

ಬೆಂಗಳೂರು: ಈಗಾಗಲೇ ಹಲವು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುತ್ತಿರುವ ಅದಿತಿ ಪ್ರಭುದೇವ, ಇದೀಗ ಎಸ್. ನಾರಾಯಣ್ ನಿರ್ದೇಶನದ ಹೊಸ ಚಿತ್ರ ‘5ಡಿ’ಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಆಯ್ಕೆಯಾಗಿರುವುದಷ್ಟೇ ಅಲ್ಲ, ಹೊಸ ವರ್ಷದ ಮೊದಲ ದಿನದಂದು ಈ ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ಪ್ರಾರಂಭವಾಗಿದೆ.
‘ಓಲ್ಡ್ ಮಾಂಕ್’ ಚಿತ್ರದ ಚಿತ್ರೀಕರಣದಲ್ಲಿ ಅದಿತಿ ಮತ್ತು ಎಸ್. ನಾರಾಯಣ್ ಅವರ ಮೊದಲ ಭೇಟಿಯಾಯಿತಂತೆ. ಈ ಸಂದರ್ಭದಲ್ಲಿ ಮುಂದೊಂದು ದಿನ ಇಬ್ಬರೂ ಜತೆಯಾಗಿ ಕೆಲಸ ಮಾಡಬೇಕು ಎಂದು ಮಾತುಕತೆಯೂ ಆಯಿತಂತೆ. ಅದಾಗಿ ಕೆಲವೇ ದಿನಗಳಲ್ಲಿ ನಾರಾಯಣ್ ಅವರಿಂದ ‘5ಡಿ’ ಚಿತ್ರದಲ್ಲಿ ನಟಿಸುವ ಆಫರ್ ಅದಿತಿಗೆ ಬಂದಿದೆ. ಈ ಚಿತ್ರದಲ್ಲಿ ಅವರು ಆದಿತ್ಯಗೆ ಮೊದಲ ಬಾರಿಗೆ ನಾಯಕಿಯಾಗಿ ನಟಿಸುತ್ತಿದ್ದು, ತಮ್ಮ ಪಾತ್ರ ಮತ್ತು ಚಿತ್ರದ ಬಗ್ಗೆ ಥ್ರಿಲ್ ಆಗಿದ್ದಾರೆ.
ಇನ್ನು, ನಾರಾಯಣ್ ಲಾಕ್ಡೌನ್ ಸಂದರ್ಭದಲ್ಲಿ ನಾಲ್ಕು ಬೇರೆಬೇರೆ ತರಹದ ಕಥೆಗಳನ್ನು ಮಾಡಿಟ್ಟುಕೊಂಡಿದ್ದು, ಆ ಪೈಕಿ ಈಗ ‘5ಡಿ’ ಸೆಟ್ಟೇರಿದೆ. ಮುಂದಿನ ದಿನಗಳಲ್ಲಿ ಇನ್ನೆರಡು ಚಿತ್ರಗಳು ಶುರುವಾಗುವುದಾಗಿ ಅವರು ಹೇಳುತ್ತಾರೆ. ‘ನನ್ನ ಮಟ್ಟಿಗೆ ಇದೊಂದು ವಿಭಿನ್ನವಾದ ಚಿತ್ರ. ಬೇರೆ ಜಾನರ್ನ ಚಿತ್ರವೊಂದನ್ನು ಕೈಗತ್ತಿಕೊಂಡಿದ್ದೇನೆ. ಈ ಚಿತ್ರದ ಬಗ್ಗೆ ಏನು ಹೇಳುವುದು ಸಹ ಕಷ್ಟವೇ. ಏಕೆಂದರೆ, ಏನು ಹೇಳಿದರೂ ಕಥೆ ಬಿಟ್ಟುಕೊಟ್ಟಂತಾಗುತ್ತದೆ. ಆದಿತ್ಯ ವಿಭಿನ್ನ ಪಾತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರ ಕನ್ನಡವಲ್ಲದೆ ಬೇರೆ ಭಾಷೆಗಳಿಗೂ ಡಬ್ ಆಗಿ ಬಿಡುಗಡೆಯಾಗಲಿದೆ’ ಎನ್ನುತ್ತಾರೆ.