ನಾಯಕಿ ಇಲ್ಲದ ನಾಯಕನಾದ ಆದಿತ್ಯ; ಮಾರ್ಚ್ 19ಕ್ಕೆ ‘ಮುಂದುವರೆದ ಅಧ್ಯಾಯ’

Adithya
Published on

ಬೆಂಗಳೂರು: ದರ್ಶನ್ ಅಭಿನಯದ ‘ಚಕ್ರವರ್ತಿ’ ಚಿತ್ರದ ನಂತರ ಆದಿತ್ಯ ಅಭಿನಯದ ಯಾವೊಂದು ಚಿತ್ರ ಸಹ ಬಿಡುಗಡೆಯಾಗಿರಲಿಲ್ಲ. ‘ಮುಂದುವರೆದ ಅಧ್ಯಾಯ’ ಎಂಬ ಚಿತ್ರದಲ್ಲಿ ಅವರು ನಟಿಸಿದ್ದು, ಕಳೆದ ವರ್ಷವೇ ಈ ಚಿತ್ರ ಬಿಡುಗಡೆಯಾಗಬೇಕಿತ್ತಾದರೂ, ಲಾಕ್​ಡೌನ್​ನಿಂದ ಅದು ಸಾಧ್ಯವಾಗಲಿಲ್ಲ. ಈಗ ಮಾರ್ಚ್ 19ಕ್ಕೆ ಕೊನೆಗೂ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಇದು ಸಸ್ಪೆನ್ಸ್ ಥ್ರಿಲ್ಲರ್ ಆಗಿದ್ದು, ಬಾಲು ಚಂದ್ರಶೇಖರ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸಾಮಾನ್ಯವಾಗಿ ಅಂಡರ್​ವರ್ಲ್ಡ್ ಚಿತ್ರಗಳಲ್ಲೇ ಹೆಚ್ಚು ಗುರುತಿಸಿಕೊಂಡಿದ್ದ ಆದಿತ್ಯ, ಈ ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರಿಗೆ ನಾಯಕಿ ಇಲ್ಲವಂತೆ. ಆಶಿಕಾ ಸೋಮಶೇಖರ್ ಮತ್ತು ಚಂದನಾ ಗೌಡ ಅಭಿನಯಿಸಿದ್ದು, ಅವರಿಗೆ ಜೋಡಿಯಾಗಿ ಸಂದೀಪ್ ಕುಮಾರ್ ಮತ್ತು ಅಜಯ್ ರಾಜ್ ನಟಿಸಿದ್ದಾರೆ. ಮಿಕ್ಕಂತೆ ಮುಖ್ಯಮಂತ್ರಿ ಚಂದ್ರು, ಜೈಜಗದೀಶ್, ಮುಂತಾದವರು ನಟಿಸಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾದರೂ, ಇದರಲ್ಲೊಂದು ಒಳ್ಳೆಯ ಸಂದೇಶವಿದೆ ಎನ್ನುತ್ತಾರೆ ನಿರ್ದೇಶಕ ಬಾಲು ಚಂದ್ರಶೇಖರ್, ‘ಅಂಡರ್​ವರ್ಲ್ಡ್

ಚಟುವಟಿಕೆಗಳಿಗೆ ಯಾವತ್ತೂ ಕೊನೆಯೆಂಬುದೇ ಇಲ್ಲ. ಇದರ ಮಧ್ಯೆಯೇ ಜನ ಬದಲಾಗಬೇಕಿದೆ. ಜನ ಬದಲಾದರೆ ಸಮಾಜದಲ್ಲಿ ಬದಲಾವಣೆ ತರುವುದಕ್ಕೆ ಸಾಧ್ಯ ಎಂದು ಈ ಚಿತ್ರದ ಮೂಲಕ ಹೇಳುವುದಕ್ಕೆ ಹೊರಟಿದ್ದೇವೆ’ ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net