

ಬೆಂಗಳೂರು: ಅದಿತಿ ಪ್ರಭುದೇವ ಅಭಿನಯದ ಹತ್ತು ಹಲವು ಚಿತ್ರಗಳಲ್ಲಿ ಎಸ್. ನಾರಾಯಣ್ ನಿರ್ದೇಶನದ ‘5ಡಿ’ ಸಹ ಒಂದು. ಈ ಚಿತ್ರದಲ್ಲಿ ಅದಿತಿ ಪಾತ್ರವೇನು ಎಂಬ ವಿಷಯದ ಬಗ್ಗೆ ಅವರು ಹೆಚ್ಚು ಹೇಳಿಕೊಂಡಿರಲಿಲ್ಲ. ಇದೀಗ ಚಿತ್ರದ ಫೋಟೋಗಳು ಬಿಡುಗಡೆಯಾಗಿದ್ದು, ಅದಿತಿ ಅವುಗಳಲ್ಲಿ ಗೂಡ್ಸ್ ಆಟೋದ ಡ್ರೖೆವರ್ ಆಗಿ ಕಾಣಿಸಿಕೊಂಡಿದ್ದಾರೆ.
‘5ಡಿ’ ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದು, ಕಳೆದ ತಿಂಗಳು ಚಿತ್ರದ ಟ್ರೇಲರ್ ಸಹ ಬಿಡುಗಡೆಯಾಗಿದೆ. ಇನ್ನು, ಚಿತ್ರ ಬಿಡುಗಡೆಯಾಗಬೇಕಷ್ಟೇ. ಅದಕ್ಕೂ ಮುನ್ನ ಸೆನ್ಸಾರ್ ಆಗಬೇಕು. ಆ ಕೆಲಸದಲ್ಲಿ ಚಿತ್ರತಂಡದವರು ನಿರತರಾಗಿದ್ದಾರೆ. ನಾರಾಯಣ್ ಇದುವರೆಗೂ ಲವ್ ಮತ್ತು ಫ್ಯಾಮಿಲಿ ಚಿತ್ರಗಳಿಗೆ ಹೆಸರಾದವರು. ಆದರೆ, ಈ ಬಾರಿ ಬೇರೆಯ ಪ್ರಯತ್ನವನ್ನು ಮಾಡಿದ್ದಾರೆ. ಇದೊಂದು ಥ್ರಿಲ್ಲರ್ ಚಿತ್ರವಾಗಿದ್ದು, ಇದು ತಮ್ಮ ಕಡೆಯಿಂದ ಒಂದು ವಿಭಿನ್ನ ಪ್ರಯತ್ನ ಎಂದು ನಾರಾಯಣ್ ಹೇಳಿಕೊಂಡಿದ್ದಾರೆ.
‘5ಡಿ’ ಚಿತ್ರದಲ್ಲಿ ಆದಿತ್ಯ ನಾಯಕನಾಗಿ ಕಾಣಿಸಿಕೊಂಡಿದ್ದು, ಅವರಿಗೆ ನಾಯಕಿಯಾಗಿ ಅದಿತಿ ನಟಿಸಿದ್ದಾರೆ. ಎಸ್. ನಾರಾಯಣ್ ಸಹ ಚಿತ್ರದಲ್ಲೊಂದು ವಿಭಿನ್ನ ಪಾತ್ರ ಮಾಡಿದ್ದಾರೆ. ನಟನೆ-ನಿರ್ದೇಶನವಷ್ಟೇ ಅಲ್ಲ, ಸಾಹಿತ್ಯ ಬರೆದು, ಸಂಗೀತವನ್ನೂ ಅವರೇ ಸಂಯೋಜಿಸಿದ್ದಾರೆ. ಈ ಚಿತ್ರವನ್ನು ಸ್ವಾತಿ ಕುಮಾರ್ ನಿರ್ವಿುಸುತ್ತಿದ್ದಾರೆ.