

ಬೆಂಗಳೂರು: ಅದಿತಿ ಪ್ರಭುದೇವ ಅಭಿನಯದ ಚಿತ್ರಗಳ ಪಟ್ಟಿಗೆ ಪ್ರತಿತಿಂಗಳು ಒಂದಾದರೂ ಹೊಸ ಚಿತ್ರ ಸೇರ್ಪಡೆಯಾಗುತ್ತದೆ. ಕೆಲವೊಮ್ಮೆ ಎರಡೆರಡು ಆಗುವುದೂ ಉಂಟು. ಹೀಗಿರುವಾಗಲೇ ಇದೀಗ ಮತ್ತೊಂದು ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ವಿಶೇಷ ಏನೆಂದರೆ ಈ ಚಿತ್ರದಲ್ಲಿ ಅದಿತಿ ತನಿಖಾಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಈ ಹಿಂದೆ ‘ಅಥರ್ವ’ ಸಿನಿಮಾದಲ್ಲಿ ನಾಯಕನಾಗಿ ನಟಿಸುವ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದ್ದ ನಟ ಪವನ್ ತೇಜ ಈ ಚಿತ್ರದ ಹೀರೋ. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಈ ಚಿತ್ರವನ್ನು ಜೀವ ಅವರು ನಿರ್ದೇಶನ ಮಾಡಿದರೆ, ಭುವನೇಶ್ವರಿ ಪ್ರೊಡಕ್ಷನ್ಸ್ ಮೂಲಕ ವಿ ಚಂದ್ರು ನಿರ್ಮಾಣ ಮಾಡುತ್ತಿದ್ದಾರೆ. ಪಾತ್ರದ ಬಗ್ಗೆ ಒಂದಷ್ಟು ಮಾಹಿತಿ ನೀಡುವ ಚಿತ್ರದ ನಾಯಕ ಪವನ್, ‘ಇದೊಂದು ವಿಶೇಷ ಸಿನಿಮಾ. ನಿರ್ದೇಶಕ ಜೀವ ಅವರು ಅಷ್ಟೇ ಚೆನ್ನಾಗಿ ಕಥೆ ಮಾಡಿದ್ದಾರೆ. ಅದಿತಿ ಅವರೊಂದಿಗೆ ನಟಿಸುತ್ತಿರುವುದಕ್ಕೂ ಖುಷಿ ಇದೆ’ ಎನ್ನುತ್ತಾರೆ.
ಅದೇ ರೀತಿ ಅದಿತಿ ಸಹ ಮಾತನಾಡಿದರು. ‘ಜೀವ ಅವರು ಹೇಳಿದ ಕಥೆ ಇಷ್ಟವಾಯ್ತು. ನನಗಿಲ್ಲಿ ತನಿಖಾಧಿಕಾರಿಯ ಪಾತ್ರ ನೀಡಿದ್ದಾರೆ. ಈ ಮೊದಲು ನಾನು ಇಂಥ ಪಾತ್ರ ಮಾಡಿಲ್ಲ. ಹಾಗಾಗಿ ಒಂದಷ್ಟು ತಯಾರಿಯೂ ನಡೆದಿದೆ’ ಎಂದರು. ಒಟ್ಟು 45 ದಿನಗಳ ಶೂಟಿಂಗ್ ಮಾಡಿಕೊಳ್ಳುವುದು ತಂಡದ ಪ್ಲಾನ್. ಮೈಸೂರು ಸೇರಿ ರಾಜಸ್ಥಾನದಲ್ಲಿಯೂ ಶೂಟಿಂಗ್ ನಡೆಯಲಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿರಲಿದ್ದು, ಪ್ರವೀಣ್ ಸಂಗೀತ, ಸಾಯಿಸತೀಶ್ ಛಾಯಾಗ್ರಹಣ ಮಾಡಲಿದ್ದಾರೆ. ಈ ಚಿತ್ರದ ಮುಹೂರ್ತ ಇತ್ತೀಚೆಗಷ್ಟೇ ಮೈಸೂರಿನ ಕೋಟೆ ವಿನಾಯಕ ದೇವಸ್ಥಾನದಲ್ಲಿ ನಡೆಯಿತು.