

ಮುಂಬೈ: ಪ್ರಭಾಸ್ ಅಭಿನಯದ 'ಆದಿಪುರುಷ್' ಚಿತ್ರದ ಚಿತ್ರೀಕರಣ ಪ್ರಾರಂಭವಾಗುವುದು ಮುಂದಿನ ವರ್ಷವೇ ಆದರೂ, ಈಗಾಗಲೇ ತೆರೆಮರೆಯಲ್ಲಿ ಕೆಲಸಗಳು ಪ್ರಾರಂಭವಾಗಿದೆ. ವಿಶೇಷ ಎಂದರೆ, 'ಬಾಹುಬಲಿ' ಚಿತ್ರದ ದಾಖಲೆಗಳನ್ನು ಈ ಚಿತ್ರ ಮುರಿಯಲಿದೆ ಎಂದು ಹೇಳಲಾಗುತ್ತಿದೆ.
ಹೇಗೆ? ಎಂಬ ಪ್ರಶ್ನೆ ಬರುವುದು ಸಹಜ. ಪ್ರಮುಖವಾಗಿ 'ಬಾಹುಬಲಿ' ಚಿತ್ರದಲ್ಲಿ ವಿಷ್ಯುಯಲ್ ಎಫೆಕ್ಟ್ಸ್ಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿತ್ತು. ಆ ಚಿತ್ರದಲ್ಲಿ 45 ಸಾವಿರಕ್ಕೂ ಹೆಚ್ಚು ವಿಷ್ಯುಯಲ್ ಎಫೆಕ್ಟ್ಸ್ ಶಾಟ್ಗಳಿದ್ದು, ಭಾರತೀಯ ಚಿತ್ರರಂಗದಲ್ಲಿ ವಿಎಫ್ಎಕ್ಸ್ ಅಷ್ಟೊಂದು ವ್ಯಾಪಕವಾಗಿ ಬಳಸಲಾದ ಚಿತ್ರ ಎಂಬ ಹೆಗ್ಗಳಿಕೆಗೆ 'ಬಾಹುಬಲಿ' ಚಿತ್ರಕ್ಕಿತ್ತು.
ಅಷ್ಟೇ ಅಲ್ಲ, ಈ ಚಿತ್ರದ ಗ್ರಾಫಿಕ್ಸ್ ಕೆಲಸಗಳಿಗಾಗಿಯೇ, ಭಾರತದ 36 ಸ್ಟುಡಿಯೋಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ತಂತ್ರಜ್ಱರು ಕೆಲಸ ಮಾಡಿದ್ದರು. ಈ ಕೆಲಸ ತೆರೆಯ ಮೇಲೆ ಅದ್ಭುತವಾಗಿ ಮೂಡಿಬಂದಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ಗ್ರಾಫಿಕ್ಸ್ ವಿಷಯದಲ್ಲಿ 'ಬಾಹುಬಲಿ'ಯನ್ನು ಹಿಂದಿಕ್ಕಲು ಓಂ ರೌತ್ ನಿರ್ದೇಶನದ 'ಆದಿಪುರುಷ್' ಪ್ರಯತ್ನ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ಚಿತ್ರದ ಒಟ್ಟಾರೆ ಬಜೆಟ್ನಲ್ಲಿ ಅರ್ಧದಷ್ಟು ದುಡ್ಡನ್ನು ಬರೀ ವಿಎಫ್ಎಕ್ಸ್ಗೆ ಮೀಸಲಿಡಲಾಗುತ್ತಿದ್ದು, ಈ ಚಿತ್ರ ಯಾವ ಮಟ್ಟಿಗೆ ಮೂಡಿಬರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ.
ಮೂಲಗಳ ಪ್ರಕಾರ, ಚಿತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂಡಿಬರಬೇಕು ಎನ್ನುವ ನಿಟ್ಟಿನಲ್ಲಿ ನಿರ್ದೇಶಕ ಓಂ ರೌತ್ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ವಿಎಫ್ಎಕ್ಸ್ ತಂತ್ರಜ್ಱರನ್ನು ಈ ಚಿತ್ರಕ್ಕೆ ಕರೆಸುತ್ತಿದ್ದಾರಂತೆ. ಪ್ರಮುಖವಾಗಿ 'ಗೇಮ್ ಆಫ್ ಥ್ರೋನ್ಸ್'ಗೆ ಕೆಲಸ ಮಾಡಿದ್ದ ತಂತ್ರಜ್ಱರಿಂದ ಈ ಕೆಲಸ ಮಾಡಿಸಲಾಗುತ್ತದಂತೆ.
'ಆದಿಪುರುಷ್' ಚಿತ್ರವು ರಾಮಾಯಣವನ್ನಾಧರಿಸಿದ್ದು, ಈ ಚಿತ್ರವನ್ನು ಟಿ-ಸೀರೀಸ್ನ ಭೂಷಣ್ ಕುಮಾರ್ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಪ್ರಭಾಸ್ ಅವರು ರಾಮನ ಪಾತ್ರವನ್ನು ಮಾಡಿದರೆ, ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ಕಾಣಿಸಿಕೊಳ್ಳುತ್ತಿದ್ದಾರೆ.