

ವಾಲ್ಮೀಕಿ ರಾಮಾಯಣ ಆಧಾರಿತ ಚಿತ್ರ ‘ಆದಿಪುರುಷ್’. ಶ್ರೀರಾಮನಾಗಿ ಪ್ರಭಾಸ್, ಸೀತೆಯ ಪಾತ್ರದಲ್ಲಿ ಕೃತಿ ಸನೋನ್ ನಟಿಸಿರುವ ಈ ಚಿತ್ರಕ್ಕೆ ‘ತಾನ್ಹಾಜಿ’ ನಿರ್ದೇಶಕ ಓಂ ರಾವತ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಪೋಸ್ಟರ್ಗಳು ಮತ್ತು ಟೀಸರ್ ಬಿಡುಗಡೆಯಾಗಿದ್ದು, ಥ್ರೀಡಿಯಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ಮೂಡಿಬರಲಿದೆ. ಈ ಹಿಂದೆ ಚಿತ್ರತಂಡ ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ 2023ರ ಜನವರಿ 12ರಂದು ಬಿಡುಗಡೆ ದಿನಾಂಕ ಘೋಷಿಸಿತ್ತು.
ಆದರೆ, ಟೀಸರ್ನ ಗ್ರಾಫಿಕ್ಸ್ಗೆ ಬಗ್ಗೆ ಅಭಿಮಾನಿಗಳು ಅಸಮಾಧಾನ ಹೊರಹಾಕಿದರು. ಹಾಗೆಯೇ ಪಾತ್ರಗಳ ಡಿಸೈನ್, ಕಾಸ್ಟ್ಯೂಮ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಬಗ್ಗೆ ಹಲವು ಅಪಸ್ವರಗಳು ಎದ್ದವು. ಅದರ ನಡುವೆ ಸಂಕ್ರಾಂತಿ ಹಬ್ಬದ ಸಮಯದಲ್ಲೇ ವಿಜಯ್ ಮತ್ತು ರಶ್ಮಿಕಾ ಮಂದಣ್ಣ ನಟಿಸಿರುವ ‘ವಾರಿಸು’ ಹಾಗೂ ತೆಲುಗಿನಲ್ಲಿ ಬಾಲಯ್ಯ ನಾಯಕನಾಗಿರುವ ‘ವೀರಸಿಂಹರೆಡ್ಡಿ’ ಚಿತ್ರಗಳು ರಿಲೀಸ್ ಆಗುವುದಾಗಿ ಘೋಷಿಸಿಕೊಂಡಿವೆ. ಜತೆಗೆ ತಮಿಳಿನಲ್ಲಿ ಅಜಿತ್ ಕುಮಾರ್ ನಟಿಸುತ್ತಿರುವ ‘ತುನಿವು’ ಹಾಗೂ ತೆಲುಗಿನಲ್ಲಿ ಚಿರಂಜೀವಿ ಅಭಿನಯಿಸುತ್ತಿರುವ ‘ವಾಲ್ಟೇರ್ ವೀರಯ್ಯ’ ಜತೆಗೆ ರವಿತೇಜ ನಟಿಸುತ್ತಿರುವ ಹೆಸರಿಡದ ಚಿತ್ರ ಸಹ ಅದೇ ಸಮಯದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.
ಹೀಗಾಗಿ ಒಂದೆಡೆ ಚಿತ್ರದ ಗುಣಮಟ್ಟದ ಬಗ್ಗೆ ಎದ್ದಿರುವ ಪ್ರಶ್ನೆಗಳು, ಮತ್ತೊಂದೆಡೆ ತಮ್ಮ ಚಿತ್ರ ಬಿಡುಗಡೆ ಸಮಯದಲ್ಲೇ ದಕ್ಷಿಣದಲ್ಲಿ ಸ್ಟಾರ್ ಚಿತ್ರಗಳು ರಿಲೀಸ್ ಆಗುತ್ತಿರುವ ಕಾರಣ ‘ಆದಿಪುರುಷ್’ ಚಿತ್ರತಂಡದವರು ಮನಸ್ಸು ಬದಲಿಸಿದ್ದಾರೆ. 2023ರ ಸಂಕ್ರಾಂತಿ ಬದಲಿಗೆ ಏಪ್ರಿಲ್ನ ಬೇಸಗೆ ರಜೆಯಲ್ಲಿ ರಿಲೀಸ್ ಮಾಡಲು ಆಲೋಚಿಸುತ್ತಿದ್ದಾರೆ. -ಏಜೆನ್ಸೀಸ್