ಸ್ಪರ್ಧೆಯಿಂದ ಹಿಂದೆ ಸರಿಯಿತಾ 'ಆದಿಪುರುಷ್​'? ಜನವರಿಯಲ್ಲಿ ಬಿಡುಗಡೆ ಡೌಟು!

Adipurush
Published on

ಮುಂಬೈ: ಕೆಲವು ದಿನಗಳಿಂದ ಇಂಥದ್ದೊಂದು ಅನುಮಾನ ಎಲ್ಲರಲ್ಲೂ ಇದ್ದೇ ಇತ್ತು. ಸಂಕ್ರಾಂತಿಗೆ ಅಷ್ಟೆಲ್ಲಾ ದೊಡ್ಡ ಚಿತ್ರಗಳು ಇರುವಾಗ, ಪ್ರಭಾಸ್​ ಅಭಿನಯದ 'ಆದಿಪುರುಷ್​' ಚಿತ್ರವು ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಎಂಬ ಮಾತಿತ್ತು. ಅದೀಗ ನಿಜವಾಗುವ ಹಂತಕ್ಕೆ ಬಂದಿದೆ.

ಸಂಕ್ರಾಂತಿಗೆ ಬಿಡುಗಡೆ ಎಂದು ಎಂದು 'ಆದಿಪುರುಷ್​' ತಂಡದವರು ಮೊದಲೇ ಘೋಷಿಸಿದ್ದರೂ. ಆ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾದಾಗ, ಯಾರೊಬ್ಬರೂ ಸಹ ಸ್ಪರ್ಧೆಗೆ ಇಳಿದಿರಲಿಲ್ಲ. ಕ್ರಮೇಣ ಚಿರಂಜೀವಿ ಅಭಿನಯದ 'ವಾಲ್ಟರ್​ ವೀರಯ್ಯ', ನಂದಮೂರಿ ಬಾಲಕೃಷ್ಣ ಅಭಿನಯದ 'ವೀರ ಸಿಂಹ ರೆಡ್ಡಿ', ವಿಜಯ್​ ಅಭಿನಯದ 'ವಾರಿಸು' ಮತ್ತು ಅಜಿತ್​ ಅಭಿನಯದ 'ತುನಿವು' ಚಿತ್ರಗಳು ಅದೇ ದಿನ ಬಿಡುಗಡೆ ಎಂದು ಘೋಷಣೆಯಾದವು.

ಯಾವಾಗ ಇಷ್ಟೆಲ್ಲ ಚಿತ್ರಗಳು 2023ರ ಸಂಕ್ರಾಂತಿಗೆ ಬರುತ್ತವೆ ಎಂದು ಸುದ್ದಿಯಾಯಿತೋ ಆಗ ಚಿತ್ರತಂಡದವರಿಗೆ ಭಯ ಶುರುವಾಗಿದೆ. ಪ್ರಮುಖವಾಗಿ ಇಷ್ಟೆಲ್ಲಾ ಪೈಪೋಟಿ ಇರುವುದು ದಕ್ಷಿಣ ಭಾರತದಲ್ಲಿ. ಪ್ರಭಾಸ್​ ಸಹಗೆ ದಕ್ಷಿಣ ಭಾರತದಲ್ಲಿ ದೊಡ್ಡ ಮಾರುಕಟ್ಟೆ ಇದೆ. ಹೀಗಿರುವಾಗ, ಇಷ್ಟೆಲ್ಲ ಚಿತ್ರಗಳ ಮಧ್ಯೆ ಚಿತ್ರ ಕಳೆದು ಹೋಗಿಬಿಡಬಹುದು ಎಂಬ ಆತಂಕ ಚಿತ್ರತಂಡದವರಿಗೆ. ಅಷ್ಟು ಸಾಲದೆಂಬಂತೆ, ಚಿತ್ರದ ಟೀಸರ್​ಗೆ ಇತ್ತೀಚೆಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ಒಂದು ಪಕ್ಷ ಚಿತ್ರವೇನಾದರೂ ನಿರೀಕ್ಷಿತ ಮಟ್ಟದಲ್ಲಿ ಮೂಡಿಬರಲಿಲ್ಲವೆಂದರೆ, ಅಷ್ಟೆಲ್ಲ ಚಿತ್ರಗಳ ಮಧ್ಯೆ ಕಳೆದು ಹೋಗುವುದು ಗ್ಯಾರಂಟಿ ಎಂದು ಚಿತ್ರತಂಡಕ್ಕೆ ಅನಿಸಿದೆ. ಅದೇ ಕಾರಣ, ಮುಂದಿನ ವರ್ಷ ಬೇಸಿಗೆಗೆ ಚಿತ್ರವನ್ನು ಮುಂದೂಡಲಾಗಿದೆ.

ಹಾಗಂತ ಚಿತ್ರತಂಡದವರು ಚಿತ್ರ ಮುಂದಕ್ಕೆ ಹೋಗಿಲ್ಲ. ಹಾಗೆಯೇ ಹೊಸ ದಿನಾಂಕವನ್ನು ಘೋಷಿಸಿಲ್ಲ. ಮುಂದಿನ ಬೇಸಿಗೆಯ ಸಂದರ್ಭದಲ್ಲಿ ಸೂಕ್ತ ಸಮಯ ನೋಡಿಕೊಂಡು ಚಿತ್ರದ ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಲಾಗುತ್ತದಂತೆ. ಅಲ್ಲಿಯವರೆಗೂ ಚಿತ್ರ ಸಂಕ್ರಾಂತಿಗೆ ಬಿಡುಗಡೆಯಾಗಲಿದೆ ಎಂದು ನಂಬಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net