

ಬೆಂಗಳೂರು: ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಇಡೀ ಚಂದನವನ ನಿರ್ಗತಿಕರ ಬೆನ್ನಿಗೆ ನಿಂತಿದೆ. ಸಿನಿಮಾ ಕೂಲಿಕಾರ್ಮಿಕರ ಜತೆಗೆ ಕೊಳಗೇರಿ ಪ್ರದೇಶದಲ್ಲಿ ವಾಸಿಸುತ್ತಿರುವವರ ಕಷ್ಟಕ್ಕೂ ಮಿಡಿಯುತ್ತಿದ್ದಾರೆ. ಆಹಾರ ವಿತರಣೆ, ದಿನಸಿ ಪೂರೈಕೆ ಮಾಡುತ್ತಿದ್ದಾರೆ. ಅದೇ ರೀತಿ ಸ್ಯಾಂಡಲ್‌ವುಡ್ ಟ್ವಿನ್ ಸಿಸ್ಟರ್ಸ್ ಅದ್ವಿತಿ ಶೆಟ್ಟಿ, ಅಶ್ವಿತಿ ಶೆಟ್ಟಿ ಮತ್ತು ತಂಡ ಸ್ಲಂ ಪ್ರದೇಶಗಳಿಗೆ ತೆರಳಿ ಆಹಾರ ಹಂಚಿಕೆ ಮಾಡಿದೆ. ಕಳೆದ ಹಲವು ದಿನಗಳಿಂದ ಶುರುವಾಗಿರುವ ಈ ಕೆಲಸವನ್ನು ಮತ್ತಷ್ಟು ದೊಡ್ಡ ಪ್ರಮಾಣದಲ್ಲಿ ಮಾಡಲು ನಿರ್ಧರಿಸಲಾಗಿದೆ. ಅಂದರೆ, ಸಿನಿಮಾದ ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡುವ 500 ಕುಟುಂಬಗಳಿಗೆ ದಿನಸಿ ಪೂರೈಕೆ ಮಾಡುವ ಕೆಲಸಕ್ಕೆ ಶೀಘ್ರದಲ್ಲಿ ಕೈ ಜೋಡಿಸಲಿದ್ದಾರೆ.
ಸ್ಯಾಂಡಲ್‌ವುಡ್ ಕೋವಿಡ್ ವಾರಿಯರ್ಸ್ ಎಂಬ ಹೆಸರಿಟ್ಟುಕೊಂಡು ಅದರ ಅಡಿಯಲ್ಲಿ 12 ಜನ ಕೆಲಸ ಮಾಡುತ್ತಿದ್ದು, ಬೆಳ್ಳಂದೂರು ಕೊಳಗೇರಿ ಪ್ರದೇಶಗಳಿಗೆ ಆಹಾರ ಪೂರೈಕೆ ಮಾಡಿಬಂದಿದ್ದಾರೆ. ಅವಳಿ ಸಹೋದರಿಯರು ಕೈಲಾದ ಮಟ್ಟಿಗೆ ಒಂದಷ್ಟು ಮೊತ್ತ ಹಾಕಿ, ಸಾಮಾಜಿಕ ಜಾಲತಾಣದಲ್ಲಿ ನಿಧಿ ಸಂಗ್ರಹಕ್ಕಾಗಿ ಕೈ ಜೋಡಿಸಿ ಎಂದಿದ್ದರು. ಬಳಿಕ ನೂರಾರು ಮಂದಿಯಿಂದ ದೊಡ್ಡ ಮೊತ್ತವೇ ಹರಿದು ಬಂತು ಎಂದು ಮಾಹಿತಿ ನೀಡುತ್ತಾರೆ ಅದ್ವಿತಿ ಶೆಟ್ಟಿ.
‘ಹೇಗಾದರೂ ಮಾಡಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು ಎಂದುಕೊಳ್ಳುತ್ತಿದ್ದೆವು. ಆಗ ಜಾಲತಾಣದಲ್ಲಿ ಒಂದು ಊಟಕ್ಕೆ 30 ರೂ. ಆ ಮೊತ್ತವನ್ನು ನೀಡಿದರೆ, ಅದನ್ನು ಅವಶ್ಯಕತೆ ಇದ್ದವರಿಗೆ ಪೂರೈಸುತ್ತೇವೆ ಎಂದಿದ್ದೆವು. ಅಭಿಮಾನಿಗಳಿಂದ ದೊಡ್ಡ ಬೆಂಬಲ ಸಿಕ್ಕಿತು. 30 ರೂಪಾಯಿಯಿಂದ 10ಸಾವಿರ ರೂ.ವರೆಗೂ ಹಣ ಹಾಕಿದ್ದಾರೆ’ ಎನ್ನುತ್ತಾರೆ ಅದ್ವಿತಿ.
ಇನ್ನು ಅದ್ವಿತಿ ಅಶ್ವಿತಿಗೆ ಕೊಳಗೇರಿ ಪ್ರದೇಶವನ್ನು ಗುರುತಿಸುವಿಕೆಯಲ್ಲಿ ಪ್ರತಾಪ್ ಮತ್ತು ಶಿವಾಜಿ ಸಹಕರಿಸಿದ್ದು, ಅವರಿಗೂ ಧನ್ಯವಾದ ಅರ್ಪಿಸುತ್ತಾರೆ. ಇನ್ನೆರಡು ದಿನಗಳ ಬಳಿಕ ಪೊಲೀಸರಿಗೂ ಹಣ್ಣು, ಜ್ಯೂಸ್ ವಿತರಣೆ ಮಾಡುವ ಕೆಲಸಕ್ಕೂ ಈ ತಂಡ ಕೈ ಜೋಡಿಸಲಿದೆಯಂತೆ.