ಸಂಜಯ್ ದತ್ ಹುಟ್ಟುಹಬ್ಬಕ್ಕೆ ಅಧೀರನ ಟೀಸರ್?

Adheera
Published on

ಬೆಂಗಳೂರು: ಯಶ್ ಅಭಿನಯದ ‘ಕೆಜಿಎಫ್ 2’ ಚಿತ್ರತಂಡದಿಂದ ಅಪ್​ಡೇಟ್ ಬರದೆ ಬಹಳ ಕಾಲವೇ ಆಗಿದೆ. ಜುಲೈ 16ಕ್ಕೆ ಬಿಡುಗಡೆಯಾಗಬೇಕಿದ್ದ ಚಿತ್ರವು, ಇದೀಗ ಮುಂದಕ್ಕೆ ಹೋಗಿದೆ. ಸೆಪ್ಟೆಂಬರ್ 09ಕ್ಕೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬಂದಿತ್ತಾದರೂ, ಚಿತ್ರತಂಡ ಈ ಕುರಿತು ಯಾವುದೇ ಸ್ಪಷ್ಟನೆ ನೀಡಲಿಲ್ಲ. ಬರೀ ಬಿಡುಗಡೆ ದಿನಾಂಕವಷ್ಟೇ ಅಲ್ಲ, ಚಿತ್ರ ಯಾವ ಹಂತದಲ್ಲಿದೆ, ಏನಾಗುತ್ತಿದೆ ಎಂಬ ಮಾಹಿತಿಯನ್ನೂ ಚಿತ್ರತಂಡ ಬಿಟ್ಟುಕೊಟ್ಟಿಲ್ಲ.

ಹೀಗಿರುವಾಗಲೇ, ಸದ್ಯದಲ್ಲೇ ಒಂದು ಅಪ್​ಡೇಟ್ ಸಿಗುವ ಸಾಧ್ಯತೆ ಇದೆ. ಹಾಗಂತ ಚಿತ್ರತಂಡವೇನೂ ಹೇಳಿಕೊಂಡಿಲ್ಲ. ಆದರೆ, ಅಭಿಮಾನಿಗಳಿಗೆ ಒಂದು ನಿರೀಕ್ಷೆ ಇದೆ. ಅದಕ್ಕೆ ಕಾರಣ, ಜುಲೈ 29ಕ್ಕೆ ಸಂಜಯ್ ದತ್ ಹುಟ್ಟುಹಬ್ಬ. ಕಳೆದ ವರ್ಷ, ದತ್ ಹುಟ್ಟುಹಬ್ಬದ ಸಂದರ್ಭದಲ್ಲಿ ಅಧೀರ ಪಾತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿತ್ತು. ಈ ಬಾರಿ ಸಹ ಅಂಥದ್ದೇ ಏನಾದರೂ ಬಿಡುಗಡೆಯಾಗಬಹುದು ಎಂಬ ನಿರೀಕ್ಷೆ ಹಲವರಲ್ಲಿದೆ. ಅದು ಟೀಸರ್ ಇರಬಹುದು, ಖಳನಾಯಕನ ಪರಿಚಯಿಸುವ ಹಾಡಿರಬಹುದು, ಇದ್ಯಾವುದೂ ಅಲ್ಲದಿದ್ದರೆ ಅಧೀರನ ಹೊಸ ಪೋಸ್ಟರ್ ಆದರೂ ಬಿಡುಗಡೆಯಾಗಬಹುದು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಏನು ಬಿಡುಗಡೆಯಾಗುತ್ತಿದೆ ಎನ್ನುವುದಕ್ಕಿಂತ ಏನಾದರೂ ಬಿಡುಗಡೆ ಮಾಡಿ ಎಂದು ಸೋಷಿಯಲ್ ಮೀಡಿಯಾ ಮೂಲಕ ಹಲವರು ಒತ್ತಾಯ ಮಾಡುತ್ತಿದ್ದಾರೆ.

ಸಾಮಾನ್ಯವಾಗಿ, ಚಿತ್ರದ ಕುರಿತು ಏನಾದರೂ ಅಪ್​ಡೇಟ್​ಗಳಿದ್ದರೆ, ಕೆಲವು ದಿನಗಳ ಮುಂಚೆಯೇ ಸಾಮಾಜಿಕ ಜಾಲತಾಣಗಳಲ್ಲಿರುವ ಹೊಂಬಾಳೆ ಫಿಲಂಸ್ ಖಾತೆ ಮೂಲಕ ಹೇಳಲಾಗುತ್ತದೆ. ಆದರೆ, ಇನ್ನು ನಾಲ್ಕೇ ದಿನಗಳೀದ್ದರೂ ಚಿತ್ರತಂಡದಿಂದ ಸದ್ಯಕ್ಕೆ ಯಾವುದೇ ಘೋಷಣೆಗಳಾಗಿಲ್ಲ. ಹಾಗಾದರೆ, ಅಭಿಮಾನಿಗಳ ನಿರೀಕ್ಷೆ ಸುಳ್ಳಾಗುತ್ತದಾ? ಉತ್ತರಕ್ಕಾಗಿ ಜುಲೈ 29ರವರೆಗೂ ಕಾಯಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net