

ಬೆಂಗಳೂರು: ಸ್ಯಾಂಡಲ್ವುಡ್ ನಟಿ ಆಶಿಕಾ ರಂಗನಾಥ್ ಸಾಲು ಸಾಲುಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಅವರ ಒಂದಷ್ಟು ಸಿನಿಮಾ ಕೆಲಸಗಳು ಮುಗಿದು ಬಿಡುಗಡೆಗೆ ಸಿದ್ಧವಾಗಿದ್ದರೆ, ಮತ್ತೊಂದಿಷ್ಟು ಶೂಟಿಂಗ್ ಹಂತದಲ್ಲಿವೆ. ಇವೆಲ್ಲದರ ನಡುವೆ ಹೊಸ ಪ್ರಾಜೆಕ್ಟ್ಗಳ ಕಥೆ ಕೇಳುವುದರಲ್ಲಿಯೂ ಅವರು ಬಿಜಿ. ಸದ್ಯ ಪವನ್ ಒಡೆಯರ್ ನಿರ್ದೇಶನದ ‘ರೇಮೊ’ ಚಿತ್ರದಲ್ಲಿ ಆಶಿಕಾ ನಟಿಸಿದ್ದಾರೆ. ಆ ಚಿತ್ರದ ಬಹುತೇಕ ಶೂಟಿಂಗ್ ಮುಕ್ತಾಯವಾಗಿದೆ. ಇನ್ನೇನು ಕೇವಲ ಮೂರು ದಿನಗಳ ಪ್ಯಾಚ್ವರ್ಕ್ ಮುಗಿದರೆ, ಸಿನಿಮಾ ಮುಗಿದಂತೆ. ಇತ್ತ ಮಹೇಶ್ ಕುಮಾರ್ ನಿರ್ದೇಶನದ ‘ಮದಗಜ’ ಚಿತ್ರದ ಶೂಟಿಂಗ್ ಕೊನೇ ಹಂತಕ್ಕೆ ಬಂದು ನಿಂತಿದೆ. ಆ ಗ್ಯಾಪ್ನಲ್ಲಿ ತಮ್ಮ ಭಾಗದ ಡಬ್ಬಿಂಗ್ ಮುಗಿಸಿದ್ದಾರೆ ಆಶಿಕಾ. ‘ಮದಗಜ’ ಡಬ್ಬಿಂಗ್ ಪ್ರಕ್ರಿಯೆಯೇ ಒಂದು ಹೊಸ ಅನುಭವ ಎಂಬುದು ಅವರ ಮಾತು. ‘ಹಳ್ಳಿ ಹುಡುಗಿಯ ಪಾತ್ರ ಮಾಡಿರುವುದರಿಂದ ಭಾಷೆಯಲ್ಲಿ ಆ ಸೊಗಡಿದೆ. ಕೃಷಿ ಬಗ್ಗೆ ವಿಶೇಷ ಆಸಕ್ತಿ ಇರುವ ಪಲ್ಲವಿ ಹೆಸರಿನ ಪಾತ್ರ ನನ್ನದು. ಡಬ್ಬಿಂಗ್ ಸಮಯದಲ್ಲಿ ಆ ಭಾಷೆಯ ಬಳಕೆ ಕಷ್ಟ ಅನಿಸಿತು. ಸಂಭಾಷಣೆಯ ಹರಿವು ಎಲ್ಲಿಯೂ ಮಿಸ್ ಆಗಬಾರದೆಂಬ ಕಾರಣಕ್ಕೆ ದೊಡ್ಡ ದೊಡ್ಡ ಡೈಲಾಗ್ಗಳನ್ನು ಹೇಳಬೇಕಿತ್ತು. ಚೂರು ಭಾಷೆ ಬಳಸುವಿಕೆ ಆಚೀಚೆ ಆದರೂ ಮತ್ತೆ ಮೊದಲಿನಿಂದ ಹೇಳಬೇಕಿತ್ತು. ನಿಜಕ್ಕೂ ನನಗಿದು ಹೊಸ ಅನುಭವ. ಈ ಚಿತ್ರದಿಂದ ಕಲಿಯುವುದಕ್ಕೂ ಸಾಕಷ್ಟು ಸಿಕ್ಕಿತು’ ಎಂಬುದು ಆಶಿಕಾ ಮಾತು.
ಆಗಸ್ಟ್ನಲ್ಲಿ ಪರಭಾಷೆ ಸಿನಿಮಾ: ಆಶಿಕಾ ಕನ್ನಡದ ಜತೆಗೆ ಪರಭಾಷೆ ಚಿತ್ರರಂಗಕ್ಕೂ ಪದಾರ್ಪಣೆ ಮಾಡಲು ತಯಾರಿ ನಡೆಸಿದ್ದಾರೆ. ಈ ನಡುವೆ ಹಲವು ಕಥೆಗಳು ಅವರನ್ನು ಅರಸಿ ಬಂದಿವೆ. ‘ಸದ್ಯ ಕೈಯಲ್ಲಿರುವ ಸಿನಿಮಾಗಳನ್ನು ಮುಗಿಸಿದರೆ ನನ್ನ ಡೇಟ್ಸ್ ಫ್ರೀ ಆಗುತ್ತದೆ. ಈಗಾಗಲೇ ಪರಭಾಷೆಯ ಒಂದು ಸಿನಿಮಾ ಮಾತುಕತೆ ನಡೆಯುತ್ತಿದೆ. ಅಧಿಕೃತವಾಗಿ ಇನ್ನೂ ಸಹಿ ಹಾಕಿಲ್ಲ. ಎಲ್ಲವೂ ಅಂದುಕೊಂಡಂತೆ ಆದರೆ, ಆಗಸ್ಟ್ನಲ್ಲಿ ಆ ಸಿನಿಮಾ ಕೆಲಸ ಶುರುವಾಗಲಿದೆ’ ಎನ್ನುತ್ತಾರೆ ಆಶಿಕಾ.
ಸೀಮಿತ ಪಾತ್ರಕ್ಕೆ ಅಂಟಿಕೊಳ್ಳುವುದಿಲ್ಲ ...: ‘ಸಿನಿಮಾ ಮಾಡುವ ಶೈಲಿ ಬದಲಾಗುತ್ತಿದೆ. ಅದಕ್ಕೆ ತಕ್ಕಂತೆ ನಾವೂ ಬದಲಾಗಬೇಕಿದೆ. ಈಗಾಗಲೇ ಸಾಕಷ್ಟು ಕಥೆ ಕೇಳಿದ್ದೇನೆ. ಒಂದೇ ಥರಹದ ಪಾತ್ರಗಳೇ ಹೆಚ್ಚೆಚ್ಚು ಬರುತ್ತಿರುವುದರಿಂದ ಹೊಸತನ್ನು ಪ್ರಯತ್ನಿಸಬೇಕೆಂದುಕೊಂಡಿದ್ದೇನೆ. ಇಲ್ಲಿಯವರೆಗೂ ಮಾಡಿದ್ದಕ್ಕಿಂತ ಚಾಲೆಂಜಿಂಗ್ ಪಾತ್ರ, ವಿಭಿನ್ನ ಸ್ಕ್ರಿಪ್ಟ್ಗಾಗಿ ಕಾಯುತ್ತಿದ್ದೇನೆ. ನೋಡೋಣ ...’ ಎನ್ನುತ್ತಾರೆ ಆಶಿಕಾ.