

ಬೆಂಗಳೂರು: ಸ್ಯಾಂಡಲ್ವುಡ್ ನಟಿ ಸೋನಲ್ ಮೊಂತೆರೋ ಸದ್ಯ ಹಲವು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಈ ಮಧ್ಯೆ, ಅವರು ಇನ್ನೂ ಒಂದು ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದು, ಆ ಚಿತ್ರಕ್ಕೆ ‘ಸಮರ್ಥ್’ ಎಂಬ ಶೀರ್ಷಿಕೆ ಅಂತಿಮವಾಗಿದೆ. ಪ್ರವೀರ್ ಶೆಟ್ಟಿ ನಾಯಕನಾಗಿ ನಟಿಸಿದರೆ, ರಾಜಾ ವೆಂಕಯ್ಯ ಈ ಸಿನಿಮಾ ನಿರ್ದೇಶನ ಮಾಡಲಿದ್ದಾರೆ.
ಈ ಸಿನಿಮಾ ತಮಿಳಿನಲ್ಲಿಯೂ ಸಿದ್ಧವಾಗುತ್ತಿದ್ದು, ತಮಿಳು ಅವತರಣಿಕೆಯಲ್ಲಿ ‘ವೇದಾದ್ರಿ’ ಎಂಬ ಹೆಸರಿನಲ್ಲಿ ಮೂಡಿಬರಲಿದೆ. ಅಲ್ಲಿ ಕಿಶೋರ್ ಮತ್ತು ಎಸ್ತರ್ ನರೋನ್ಹಾ ನಾಯಕ-ನಾಯಕಿಯಾಗಿ ಅಭಿನಯಿಸಲಿದ್ದಾರೆ. ಇನ್ನುಳಿದಂತೆ, ಪ್ರತಾಪ್ ಪೋತನ್, ಅವಿನಾಶ್, ಪವಿತ್ರಾ ಲೋಕೇಶ್, ಸಂದೀಪ್ ಮಲಾನಿ ಎರಡೂ ಭಾಷೆಗಳಲ್ಲಿ ಇರಲಿದ್ದಾರೆ. ಈ ಸಿನಿಮಾ ಬಗ್ಗೆ ಪ್ರತಿಕ್ರಿಯಿಸಿದ ಸೋನಲ್, ‘ಸಿನಿಮಾ ಬಗ್ಗೆ ಈಗಲೇ ಏನೂ ಹೇಳಲ್ಲ. ತಂಡದೊಂದಿಗೆ ಇನ್ನೂ ಒಂದು ಹಂತದ ಮಾತುಕತೆಯಾಗಬೇಕಿದೆ. ಅದಾದ ಬಳಿಕ ತಿಳಿಸುತ್ತೇನೆ’ ಎಂದಿದ್ದಾರೆ.
ಅಂದಹಾಗೆ, ಈ ಚಿತ್ರದ ನಿರ್ವಣದ ಜವಾಬ್ದಾರಿ ಹೊತ್ತಿದ್ದು, ‘ಡೆಕ್ಕನ್ ಕಿಂಗ್’ ಸಂಸ್ಥೆಯ ಬಿಜು ಶಿವಾನಂದ್. ‘ಸಮರ್ಥ್’ ಸೇರಿದಂತೆ ಒಟ್ಟು ಆರು ಚಿತ್ರಗಳನ್ನು ಘೋಷಿಸಿರುವ ಅವರು, ಈ ಪೈಕಿ ಕೆಲವು ಚಿತ್ರಗಳ ಚಿತ್ರೀಕರಣಕ್ಕೂ ಚಾಲನೆ ನೀಡಿದ್ದಾರೆ. ‘ಸ್ಥಂಭಂ’ನಲ್ಲಿ ಗರುಡ ರಾಮ್ ನಟಿಸಿದರೆ, ‘ಮಂಗಳೂರು’ ಶೀರ್ಷಿಕೆಯ ಚಿತ್ರವನ್ನು ಸಂದೀಪ್ ಮಲಾನಿ ನಿರ್ದೇಶಿಸಲಿದ್ದಾರೆ. ‘ಫೆಬ್ರವರಿ 29 ಸೂರ್ಯಗಿರಿ’ ಚಿತ್ರವೂ ಇದೇ ವೇಳೆ ಘೋಷಣೆ ಆಗಿದೆ. ತಮಿಳು ನಿರ್ವಪಕರೊಬ್ಬರು ಕನ್ನಡದಲ್ಲಿ ಏಕಕಾಲಕ್ಕೆ ಇಷ್ಟೊಂದು ಸಂಖ್ಯೆಯ ಚಿತ್ರಗಳನ್ನು ನಿರ್ವಿುಸುವುದಕ್ಕೆ ಹೊರಟಿದ್ದರ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಸ್ವಾಗತಿಸಿದ್ದಾರೆ.